ಸಾರಾಂಶ
ಹರ್‍ಯಾಣ ರಾಜ್ಯದಲ್ಲಿರುವ ಐತಿಹಾಸಿಕ ಕರ್ನಾಲ್ ಲೋಕಸಭಾ ಕ್ಷೇತ್ರವು ಈ ಬಾರಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸ್ಪರ್ಧೆಯಿಂದ ಕಳೆಗಟ್ಟಿದೆ. ಇವರ ಸ್ಪರ್ಧೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಹ ತನ್ನ ಯುವ ಮೋರ್ಚಾ ರಾಜ್ಯಾಧ್ಯಕ್ಷ ದಿವ್ಯಾಂಶು ಬುಧಿರಾಜ ಅವರನ್ನು ಕಣಕ್ಕಿಳಿಸಿ ಪ್ರಬಲ ಸ್ಪರ್ಧೆ ಒಡ್ಡುವ ಲಕ್ಷಣಗಳನ್ನು ತೋರಿಸಿದೆ.
ಹೇಗಿದೆ ಖಟ್ಟರ್ ಅಲೆ?
ಮೊದಲ ಬಾರಿ ಶಾಸಕರಾದಾಗಲೇ ಅಚ್ಚರಿ ರೀತಿಯಲ್ಲಿ ಹರ್‍ಯಾಣದ ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದ್ದ ಮನೋಹರ್ ಲಾಲ್ ಖಟ್ಟರ್ ಅಷ್ಟೇ ಅಚ್ಚರಿಯಲ್ಲಿ ತಮ್ಮ ಪದವಿಯನ್ನು ಚುನಾವಣೆಗೆ ಇನ್ನು ಕೇವಲ 9 ತಿಂಗಳಿರುವಂತೆ ನಯಬ್ ಸಿಂಗ್ ಸೈನಿಗೆ ಬಿಟ್ಟುಕೊಟ್ಟರು. ಬಳಿಕ ಎಲ್ಲರೂ ತಮ್ಮ ವಯೋಸಹಜ ಕಾರಣದಿಂದ ಕ್ಷೇತ್ರ ಬಿಟ್ಟುಕೊಟ್ಟಿರಬಹುದು ಎಂದು ಯೋಚಿಸುತ್ತಿರುವಾಗಲೇ ಅವರಿಗೆ ಪಕ್ಷದ ಕೇಂದ್ರೀಯ ಸಂಸದೀಯ ಸಮಿತಿ ತಮ್ಮದೇ ಕರ್ನಾಲ್ ಕ್ಷೇತ್ರದಿಂದ ಲೋಕಸಭೆಗೆ ಟಿಕೆಟ್ ದಯಪಾಲಿಸಿತು.
ಜೊತೆಗೆ ಅವರ ಶಾಸಕತ್ವದಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಹಾಲಿ ಮುಖ್ಯಮಂತ್ರಿ ಸೈನಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಪರಸ್ಪರರು ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಕ್ಷೇತ್ರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇವರಿಗೆ ಕಳೆದ 9 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುವ ಸಾಧ್ಯತೆಗಳಿದ್ದರೂ, ಖಟ್ಟರ್ ಸಮಸ್ತ ಹರ್‍ಯಾಣ ರಾಜ್ಯವನ್ನು ಸುತ್ತಬೇಕಿರುವ ಹಿನ್ನೆಲೆಯಲ್ಲಿ ಅವರಿಗೆ ತವರಿನಲ್ಲಿ ಹಿನ್ನಡೆಯಾಗುವ ಸಾಧ್ಯತೆಯೂ ಇದೆ.
ದಿವ್ಯಾಂಶು ಗೆಲ್ಲುವರೇ? ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ದಿವ್ಯಾಂಶು ಬುಧಿರಾಜ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಇಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ, ರೈತರಿಗೆ ಬಿಜೆಪಿಯಿಂದ ಆಗಿರುವ ಅನ್ಯಾಯ, ಭಯೋತ್ಪಾದನೆ ನಿಗ್ರಹ ಮುಂತಾದ ವಿಷಯಗಳನ್ನು ಜನರ ಮುಂದಿಟ್ಟು ಜನರಿಗೆ ಬಿಜೆಪಿಯನ್ನು ಸೋಲಿಸಲು ಕರೆ ನೀಡುತ್ತಿದ್ದಾರೆ.
ಸ್ಪರ್ಧೆ ಹೇಗೆ?
ಕರ್ನಾಲ್ ಎಂಬ ಹೆಸರು ಮಹಾಭಾರತದಲ್ಲಿ ದಾನಶೂರನೆಂದೇ ಪ್ರಸಿದ್ಧನಾದ ಕರ್ಣನಿಂದ ಬಂದಿರುವುದಾಗಿ ಐತಿಹ್ಯವಿದೆ. ಹೆಸರಿಗೆ ತಕ್ಕಂತೆ ಇಲ್ಲಿ ಹಾಲಿ ಶಾಸಕ ಮತ್ತು ಸಂಸದ ತಮ್ಮ ಬಳಿಯಿದ್ದ ಅತ್ಯುನ್ನತ ಪದವಿಯನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಶಾಸಕ ಸ್ಥಾನದ ಮೊದಲ ಚುನಾವಣೆಯಲ್ಲೇ ಮುಖ್ಯಮಂತ್ರಿ ಆಗುವ ಯೋಗ ಒಲಿದಂತೆ ಸಂಸದ ಸ್ಥಾನದ ಮೊದಲ ಚುನಾವಣೆಯಲ್ಲೂ ಕೇಂದ್ರ ಸಚಿವರಾಗುವ ಅವಕಾಶಗಳಿವೆ. ಆದರೆ ಬಾಸ್ಮತಿ ಅಕ್ಕಿ ಬೆಳೆಗೆ ಪ್ರಸಿದ್ಧವಾಗಿರುವ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸಿದ ಹೋರಾಟ ಮತದಾನದಲ್ಲಿ ಆಕ್ರೋಶವಾಗಿ ಪರಿವರ್ತನೆಯಾದರೆ ಬಿಜೆಪಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಸ್ಟಾರ್ ಕ್ಷೇತ್ರ: ಕರ್ನಾಲ್
ಮತದಾನದ ದಿನ: ಮೇ.25
ವಿಧಾನಸಭಾ ಕ್ಷೇತ್ರಗಳು: 9
ರಾಜ್ಯ: ಹರ್‍ಯಾಣ
ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ - ಮನೋಹರ್ ಲಾಲ್ ಖಟ್ಟರ್
ಕಾಂಗ್ರೆಸ್ - ದಿವ್ಯಾಂಶು ಬುಧಿರಾಜ
ಜೆಜೆಪಿ - ದೇವೇಂದ್ರ ಕಾಡ್ಯಾನ್
2019ರ ಫಲಿತಾಂಶ:
ಗೆಲುವು: ಬಿಜೆಪಿ - ಸಂಜಯ್ ಭಾಟಿಯಾ
ಸೋಲು: ಕಾಂಗ್ರೆಸ್ - ಕುಲ್ದೀಪ್ ಶರ್ಮಾ
;Resize=(128,128))
;Resize=(128,128))