ಮಾ.3ಕ್ಕೆ ಸಚಿವರ ಜತೆ ಮೋದಿ ಸಭೆ: ಚುನಾವಣೆ ಫಿಕ್ಸ್‌?

| Published : Feb 22 2024, 01:53 AM IST / Updated: Feb 22 2024, 07:55 AM IST

PM Narendra Modi

ಸಾರಾಂಶ

ಲೋಕಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3ರಂದು ಕೇಂದ್ರ ಮಂತ್ರಿ ಪರಿಷತ್‌ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಪುಟ ದರ್ಜೆ ಹಾಗೂ ಎಲ್ಲ ರಾಜ್ಯ ದರ್ಜೆ ಸಚಿವರು ಭಾಗಿಯಾಗಲಿದ್ದಾರೆ.

ಪಿಟಿಐ ನವದೆಹಲಿ

ಲೋಕಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3ರಂದು ಕೇಂದ್ರ ಮಂತ್ರಿ ಪರಿಷತ್‌ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಪುಟ ದರ್ಜೆ ಹಾಗೂ ಎಲ್ಲ ರಾಜ್ಯ ದರ್ಜೆ ಸಚಿವರು ಭಾಗಿಯಾಗಲಿದ್ದಾರೆ. 

ಕಳೆದ ಬಾರಿ ಮಾ.5ಕ್ಕೆ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯನ್ನು ಘೋಷಿಸಿತ್ತು. ಹೀಗಾಗಿ ಮೋದಿ ಸಭೆಯ ಬಳಿಕ ಚುನಾವಣೆ ಘೋಷಣೆಯಾಗುವುದೇ ಎಂಬ ಕುತೂಹಲ ಮೂಡಿದೆ.

ಚಾಣಕ್ಯಪುರಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಮಂತ್ರಿಮಂಡಲದ ಸಭೆ ನಡೆಯಲಿದೆ. ಪ್ರಮುಖ ನೀತಿ ವಿಷಯಗಳ ಬಗ್ಗೆ ಚರ್ಚಿಸಲು, ವಿವಿಧ ಉಪಕ್ರಮಗಳ ಅನುಷ್ಠಾನದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮತ್ತು ಆಡಳಿತದ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಪ್ರಧಾನಿ ಈ ಸಭೆ ಕರೆದಿದ್ದಾರೆ. 

ಮುಂದಿನ ಚುನಾವಣೆ ಬಗ್ಗೆಯೂ ಚರ್ಚೆ ಆಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.ಇತ್ತೀಚಿನ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಪ್ರಾರಂಭಿಸಿದೆ. ಮುಂದಿನ ತಿಂಗಳು ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುವ ನಿರೀಕ್ಷೆಯಿದೆ.

ಮಾರ್ಚ್‌ ಮೊದಲ ವಾರ ಚುನಾವಣೆ ಘೋಷಣೆ?
2014 ರಲ್ಲಿ ಚುನಾವಣಾ ಆಯೋಗವು ಮಾ.5ರಂದು 9 ಹಂತಗಳ ಲೋಕಸಭೆ ಚುನಾವಣೆ ಘೋಷಿಸಿತ್ತು ಮತ್ತು ಮೇ 16ರಂದು ಫಲಿತಾಂಶ ಘೋಷಿಸಲಾಗಿತ್ತು. 

2019ರಲ್ಲಿ, ಮಾ.10 ರಂದು 7 ಹಂತಗಳ ಲೋಕಸಭಾ ಚುನಾವಣೆಯನ್ನು ಘೋಷಿಸಿತ್ತು ಮತ್ತು ಮೇ 23ರಂದು ಫಲಿತಾಂಶ ಪ್ರಕಟಿಸಲಾಗಿತ್ತು.

ಹೀಗಾಗಿ ಈ ಬಾರಿಯೂ ಮಾರ್ಚ್‌ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.