ಸಾರಾಂಶ
ಪಿಟಿಐ ಮುಂಬೈ
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಶೇ.10ರಷ್ಟು ಹಿಂದುಳಿದ ವರ್ಗದ (ಒಬಿಸಿ) ಮೀಸಲಾತಿ ನೀಡುವ ಮರಾಠಾ ಮೀಸಲು ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ಈ ಮೂಲಕ ಅನೇಕ ತಿಂಗಳುಗಳಿಂದ ನಡೆದಿರುವ ಮರಾಠಾ ಸಮುದಾಯದ ಹೋರಾಟಕ್ಕೆ ಸರ್ಕಾರ ಮಣಿದಿದೆ.ಸದನದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮಸೂದೆ-2024 ಅನ್ನು ಮಂಡಿಸಿದರು.
ಇದಕ್ಕೆ ಸದನ ಅಂಗೀಕಾರ ನೀಡಿತು. ಮೀಸಲು ಈಗ 10 ವರ್ಷದ ಮಟ್ಟಿಗೆ ಜಾರಿಗೆ ಬರಲಿದೆ. 10 ವರ್ಷದ ನಂತರ ಮರುಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ ಸಮೀಕ್ಷಾ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಮೀಕ್ಷೆಯು ರಾಜ್ಯದಲ್ಲಿ ಮರಾಠಾ ಸಮುದಾಯ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸೂಕ್ಷ್ಮವಾಗಿ ಅನ್ವೇಷಿಸಿದೆ.
ವರದಿಯ ಪ್ರಕಾರ, ಮರಾಠಾ ಸಮುದಾಯವು ಮಹಾರಾಷ್ಟ್ರದ ಜನಸಂಖ್ಯೆಯ ಶೇಕಡಾ 28 ರಷ್ಟಿದೆ. ಅರ್ಥಾತ್ 2.5 ಕೋಟಿ ಜನಸಂಖ್ಯೆ ಹೊಂದಿದೆ ಹಾಗೂ ಶೇ.21.22 ರಷ್ಟು ಮರಾಠಾ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ.
ಇದು ರಾಜ್ಯದ ಸರಾಸರಿ ಶೇ.17.4 ಶೇಕಡಾವನ್ನು ಮೀರಿದೆ. ಅಲ್ಲದೆ ಶೇ.84ರಷ್ಟು ಮರಾಠರು ಪ್ರಗತಿಪರರಲ್ಲ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಹೀಗಾಗಿ ಮರಾಠಾ ಸಮುದಾಯವು ಅನುಭವಿಸುತ್ತಿರುವ ಆರ್ಥಿಕ ಸಮಸ್ಯೆ ಪರಿಹರಿಸುವುದು ಹೊಸ ಶಾಸನದ ಪ್ರಾಥಮಿಕ ಉದ್ದೇಶವಾಗಿದೆ.
ಮರಾಠಾ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ಮೀಸಲಿಗಾಗಿ ಅನೇಕ ತಿಂಗಳಿನಿಂದ ಹೋರಾಟ ನಡೆಸಿದ್ದರು. ಉಪವಾಸ ಕೂಡ ಮಾಡಿದ್ದರು.
ಇತ್ತೀಚೆಗೆ ಮರಾಠರಿಗೆ, ಅವರ ಕುಲಬಾಂಧವರು ಎಂದು ಹೇಳಲಾದ ಒಬಿಸಿಗಳಾದ ಕುಣಬಿ ಸಮುದಾಯದ ಒಬಿಸಿ ಪ್ರಮಾಣಪತ್ರ ನೀಡುವ ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿತ್ತು. ಆದರೆ ತೃಪ್ತರಾಗದ ಜಾರಂಗೆ, ಮರಾಠಾ ಮೀಸಲಿಗೆ ಕಾನೂನು ರಚನೆ ಆಗಬೇಕೆಂದು ಉಪವಾಸ ಮಾಡಿದ್ದರು.