ಸಾರಾಂಶ
ಚಂಡೀಗಢ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಬಿಜೆಪಿ ಭರ್ಜರಿ ವಿಜಯ ಸಂಪಾದಿಸಿದೆ. 10 ವರ್ಷಗಳ ಆಡಳಿತ ವಿರೋಧಿ ಅಲೆ ಮೆಟ್ಟಿನಿಂತಿರುವ ಅದು, ದಾಖಲೆಯ ಸತತ 3ನೇ ಸಲ ಅಧಿಕಾರಕ್ಕೇರಿ ದಶಕದ ಬಳಿಕ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದ ಕಾಂಗ್ರೆಸ್‌ಗೆ ಭಾರೀ ಶಾಕ್ ನೀಡಿದೆ.ಆರಂಭಿಕ ಮತ ಎಣಿಕೆಯ ಹಿನ್ನಡೆ ಮೆಟ್ಟಿನಿಂತ ಬಿಜೆಪಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುವ ಹಕ್ಕು ಪಡೆದುಕೊಂಡಿದೆ. 1966ರಲ್ಲಿ ರಾಜ್ಯ ರಚನೆಯಾದಾಗಿನಿಂದಲೂ ಯಾವುದೇ ಪಕ್ಷವೂ ರಾಜ್ಯದಲ್ಲಿ ಹ್ಯಾಟ್ರಿಕ್ ಅವಧಿಗೆ ಗೆದ್ದಿರಲಿಲ್ಲ. ಇದನ್ನು ಮುರಿದಿರುವ ಬಿಜೆಪಿ ಮೊದಲ ಬಾರಿ ಹ್ಯಾಟ್ರಿಕ್ ಅವಧಿಗೆ ಜಯಿಸಿದೆ.
ಕಾಂಗ್ರೆಸ್ ವಿಫಲ:ಮತ್ತೊಂದೆಡೆ ಅಧಿಕಾರ ಹಿಡಿಯಲು ಸಜ್ಜಾಗಿದ್ದ ಕಾಂಗ್ರೆಸ್ ಸತತ ಮೂರನೇ ಬಾರಿಯೂ ವಿಫಲವಾಗಿದೆ. ಇನ್ನೊಂದೆಡೆ ಮ್ಯಾಜಿಕ್ ನಿರೀಕ್ಷೆಯಲ್ಲಿದ್ದ ಆಮ್‌ಆದ್ಮಿ, ಕಿಂಗ್‌ಮೇಕರ್‌ಗಳಾಗುವ ನಿರೀಕ್ಷೆಯಲ್ಲಿದ್ದ ಓಂ ಪ್ರಕಾಶ್ ಚೌಟಾಲಾ ಅವರ ರಾಷ್ಟ್ರೀಯ ಲೋಕದಳ ಮತ್ತು ದುಶ್ಯಂತ್ ಚೌಟಾಲಾ ಅವರ ಜೆಜೆಪಿ ದಯನೀಯ ವೈಫಲ್ಯ ಕಂಡಿವೆ.
ಭರ್ಜರಿ ಗೆಲುವು:ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಗೆಲುವಿನ ಸುಳಿವು ನೀಡಿದ್ದವು. ಅಲ್ಲದೆ ರೈತ ವಿರೋಧಿ ಹೋರಾಟ, ಕೃಷಿ ಕಾಯ್ದೆ ವಿವಾದಗಳು ಬಿಜೆಪಿಗೆ ಮುಳುವಾಗಲಿದೆ ಎಂದೇ ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಆರಂಭಿಕ ಮತ ಎಣಿಕೆಯ ಅಂಕಿ ಅಂಶಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದವು.
ಆದರೆ 9 ಗಂಟೆ ವೇಳೆಗೆ ಫಲಿತಾಂಶದಲ್ಲಿ ದಿಢೀರ್ ಬದಲಾವಣೆ ಕಂಡುಬಂದು, ಹಿನ್ನಡೆಯಲ್ಲಿದ್ದ ಬಿಜೆಪಿ ಏಕಾಏಕಿ ಮುನ್ನಡೆ ಸಾಧಿಸಿತು. ಈ ಮುನ್ನಡೆಯನ್ನು ಹಾಗೆಯೇ ಕಾದುಕೊಂಡ ಬಿಜೆಪಿ, ಬಹುಮತಕ್ಕೆ ಅಗತ್ಯವಾದ 46 ಸ್ಥಾನಗಳನ್ನು ದಾಟಿ ಗೆಲುವಿನ ನಗೆ ಬೀರಿತು.ಕಾರಣ ಏನು?:
ಆಡಳಿತ ವಿರೋಧಿ ಅಲೆ ಮೆಟ್ಟಿನಿಲ್ಲಲು ಚುನಾವಣೆ ಪೂರ್ವದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಿ ಅವರ ಜಾಗಕ್ಕೆ ನಯಾಬ್ ಸಿಂಗ್ ಸೈನಿ ತಂದಿದ್ದು, ಜಾಟ್ ಸಮುದಾಯಯೇತರ ಮತ ಒಗ್ಗೂಡಿಸುವಲ್ಲಿ ಸಫಲವಾಗಿದ್ದು, ದಲಿತ ನಾಯಕಿ ಕುಮಾರಿ ಸೆಲ್ಜಾ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಪ್ರಚಾರ ಮಾಡಿದ್ದು, ಪ್ರಧಾನಿ ಮೋದಿ ಅವರ ಭರ್ಜರಿ ಪ್ರಚಾರ, ನಗರ ಪ್ರದೇಶಗಳ ಗ್ಯಾರಂಟಿ ಮತಗಳು ಪಕ್ಷವನ್ನು ಮೂರನೇ ಬಾರಿ ಅಧಿಕಾರಕ್ಕೆ ತರಲು ಕಾರಣವಾಗಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.ಕಾಂಗ್ರೆಸ್ ಬಣಜಗಳ?:
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ದಲಿತ ನಾಯಕಿ ಕುಮಾರಿ ಶೆಲ್ಜಾ ನಡುವಿನ ಬಣ ಜಗಳ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ. ಇನ್ನು ರಾಜ್ಯದಲ್ಲಿ ಶೇ.27ರಷ್ಟಿರುವ ಜಾಟ್ ಸಮುದಾಯವನ್ನೇ ಪೂರ್ಣವಾಗಿ ಅವಲಂಬಿಸಿದ್ದು ಪಕ್ಷಕ್ಕೆ ಕೈಕೊಟ್ಟಿದೆ. ಇನ್ನೊಂದೆಡೆ 90 ಕ್ಷೇತ್ರಗಳಿಗೆ 2500ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಹೂಡಾ ಆಪ್ತ 79 ಜನರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಟಿಕೆಟ್ ಸಿಗದವರು, ಹೂಡಾ ವಿರೋಧಿ ಬಣ, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.ಇದರ ಜೊತೆಗೆ ಹೈಕಮಾಂಡ್ ಸೂಚನೆ ಹೊರತಾಗಿಯೂ ಆಪ್ ಜೊತೆ ಮೈತ್ರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ನಿರಾಕರಿಸಿದ್ದು ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆ ದೂರವಾಗಿಸಿದೆ. ಆಪ್ ಒಂದು ಸ್ಥಾನ ಗೆಲ್ಲದೇ ಇದ್ದರು ಕಾಂಗ್ರೆಸ್‌ನ ಮತ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ 10 ಸ್ಥಾನ (ಕಳೆದ ಬಾರಿ 5) ಗೆದ್ದ ಬಳಿಕ ಕಂಡುಬಂದ ಅತಿಯಾದ ಆತ್ಮವಿಶ್ವಾಸ ಕೂಡಾ ಪಕ್ಷಕ್ಕೆ ಹೊಡೆತ ನೀಡಿದೆ.
==ಹರ್ಯಾಣದಲ್ಲಿ ಸೈನಿ ಮತ್ತೆ ಸಿಎಂ ಸಾಧ್ಯತೆ
ಚಂಡೀಗಢ: ಹರ್ಯಾಣದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಹೀಗಾಗಿ ಹಾಲಿ ಸಿಎಂ ನಯಾಬ್ ಸಿಂಗ್ ಸೈನಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿ, ಅವರನ್ನೇ 2ನೇ ಬಾರಿ ಸಿಎಂ ಮಾಡುವ ಸಾಧ್ಯತೆ ದಟ್ಟವಾಗಿದೆ.ಚುನಾವಣೆಗೂ ಮುನ್ನ ಬಿಜೆಪಿಯ ಅನಿಲ್ ವಿಜ್ ತಾವು ಸಿಎಂ ರೇಸ್‌ನಲ್ಲಿದ್ದುದಾಗಿ ಹೇಳಿದ್ದರು. ಆದರೆ ಈಗ ಸೈನಿ ನೇತೃತ್ವದಲ್ಲಿ ಪಕ್ಷ ಗೆದ್ದಿರುವ ಕಾರಣ ಅವರ ಬದಲಾವಣೆ ಕಷ್ಟಸಾಧ್ಯ. ಅಲ್ಲದೆ, ಬಿಜೆಪಿ ನಾಯಕರು ಊಹಾಪೋಹಗಳಿಗೆ ತೆರೆ ಎಳೆದಿದ್ದು, ನಯಾಬ್ ಸಿಂಗ್ ಸೈನಿ ಮತ್ತೊಂದು ಅವಧಿಗೆ ಸಿಎಂ ಆಗಲಿದ್ದಾರೆ ಎಂದಿದ್ದಾರೆ. ವಿಜ್ ಕೂಡ ಹೈಕಮಾಂಡ್ ನಿಲುವಿಗೆ ತಾನು ಬದ್ಧ ಎಂದು ಬಿಜೆಪಿ ಜಯದ ನಂತರ ರಾಗ ಬದಲಿಸಿದ್ದಾರೆ.ಚುನಾವಣೆಗೆ 200 ದಿನಗಳಷ್ಟೇ ಬಾಕಿಯಿರುವಾಗ, ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ಬಳಿಕ ಸೈನಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆಡಳಿತ ವಿರೋಧಿ ಅಲೆ ನಡುವೆಯೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.