3ನೇ ಮಗುವಿಗೂ ಮಾತೃತ್ವ ರಜೆ ಕಡ್ಡಾಯ : ಸುಪ್ರೀಂ

| N/A | Published : May 25 2025, 01:05 AM IST / Updated: May 25 2025, 05:13 AM IST

ಸಾರಾಂಶ

‘ಮಾತೃತ್ವದ ರಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಆದ್ದರಿಂದ 3ನೇ ಮಗುವಿಗೂ ಅದನ್ನು ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.

 ನವದೆಹಲಿ: ‘ಮಾತೃತ್ವದ ರಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಆದ್ದರಿಂದ 3ನೇ ಮಗುವಿಗೂ ಅದನ್ನು ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.

ತಮಿಳುನಾಡಿನಲ್ಲಿ ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ 2 ಮಕ್ಕಳಿಗೆ ಮಾತ್ರ ಮಾತೃತ್ವದ ರಜೆ ನೀಡಲಾಗುತ್ತದೆ. ಇದರ ಆಧಾರದಲ್ಲಿ, ಸರ್ಕಾರಿ ಶಿಕ್ಷಕಿಯೊಬ್ಬರಿಗೆ 3ನೇ ಮಗುವಿಗೆ ಮಾತೃತ್ವ ರಜೆ ನೀಡಬೇಕು ಎಂದು ಆದೇಶಿಸಲು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಅದರ ಆದೇಶವನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

ಶಿಕ್ಷಕಿಯ 3ನೇ ಮಗು 2ನೇ ಮದುವೆಯಿಂದ ಆಗಿರುವುದನ್ನು ಗಮನಿಸಿರುವ ನ್ಯಾ। ಅಭಯ್‌ ಎಸ್‌. ಓಕಾ ಮತ್ತು ಉಜ್ಜಲ್‌ ಭುಯಾನ್‌ ಅವರ ಪೀಠ, ‘ಮಹಿಳೆಯರ ಸಂತಾನೋತ್ಪತ್ತಿ ಆಯ್ಕೆಯಲ್ಲಿ ರಾಜ್ಯದ ಅನಗತ್ಯ ಹಸ್ತಕ್ಷೇಪ ಇರಬಾರದು. ಅವರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಅಡ್ಡಿಯಾಗುವುದರಿಂದ ಮಹಿಳೆಯರ ಘನತೆಗೆ ಹಾನಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

‘ಈಗ ಮಹಿಳೆಯರು ಉದ್ಯೋಗ ಕ್ಷೇತ್ರದ ಗಣನೀಯ ಭಾಗವಾಗಿದ್ದಾರೆ. ಅವರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಸ್ತ್ರೀಯರಿಗೆ ಸಾಮಾಜಿಕ ನ್ಯಾಯ ಒದಗಿಸಲು, ಹೆರಿಗೆ ಸಮಯದಲ್ಲಿ ಕುಂದಿದ ಶಕ್ತಿಯನ್ನು ಮರುಪೂರಣಗೊಳಿಸಲು, ಮಗುವಿನ ಪಾಲನೆ ಮಾಡಲು, ಕೆಲಸದ ವಿಷಯದಲ್ಲಿ ತಮ್ಮ ದಕ್ಷತೆಯನ್ನು ಹಿಂದಿನಂತೆ ಕಾಯ್ದುಕೊಳ್ಳಲು ಅನುವು ಮಾಡಿಕೊಡಲು ಮಾತೃತ್ವ ರಜೆ ನೀಡಲಾಗುತ್ತದೆ’ ಎಂದು ಹೇಳಿದೆ.

Read more Articles on