ಇಲ್ಲಿನ ಚಂಡೋಲಾ ಕೆರೆ ಭಾಗದಲ್ಲಿ ನೆಲೆಸಿದ್ದ ಅಕ್ರಮ ಬಾಂಗ್ಲಾ ನಿವಾಸಿಗಳ ಮನೆಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರವೂ ಮುಂದುವರಿದಿದ್ದು, 2000 ಮನೆಗಳನ್ನು ನೆಲಸಮಗೊಂಡಿವೆ.

ಅಹಮದಾಬಾದ್‌: ಇಲ್ಲಿನ ಚಂಡೋಲಾ ಕೆರೆ ಭಾಗದಲ್ಲಿ ನೆಲೆಸಿದ್ದ ಅಕ್ರಮ ಬಾಂಗ್ಲಾ ನಿವಾಸಿಗಳ ಮನೆಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರವೂ ಮುಂದುವರಿದಿದ್ದು, 2000 ಮನೆಗಳನ್ನು ನೆಲಸಮಗೊಂಡಿವೆ. 1 ಲಕ್ಷ ಚದರ ಮೀಟರ್‌ ವಿಸ್ತೀರ್ಣದ ಸರ್ಕಾರಿ ಜಾಗ ಮರಳಿ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 70 ಜೆಸಿಬಿಗಳು, 200 ಟ್ರಕ್‌ಗಳು ತೆರವು ಕಾರ್ಯವನ್ನು ನಡೆಸಿದವು.

ಈ ಬಗ್ಗೆ ಮಾತನಾಡಿದ ಗುಜರಾತ್‌ನ ಗೃಹ ಖಾತೆ ರಾಜ್ಯ ಸಚಿವ ಹರ್ಷ್‌ ಸಿಂಘ್ವಿ, 1.25 ಲಕ್ಷ ಚದರ ಮೀಟರ್‌ ವಿಸ್ತೀರ್ಣದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಇದರ ತೆರವು ಕಾರ್ಯ ಮುಂದುವರಿದಿದೆ. ಪ್ರತಿ ಇಂಚು ಸರ್ಕಾರಿ ಭೂಮಿಯನ್ನು ಮರಳಿ ಪಡೆಯಲಾಗುತ್ತದೆ ಎಂದರು.

ಮಂಗಳವಾರ ಆರಂಭವಾದ ತೆರವು ಕಾರ್ಯದಲ್ಲಿ 1000ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಲಾಗಿದೆ. ಇದಕ್ಕಾಗಿ 70 ಜೆಸಿಬಿ, 200 ಟ್ರಕ್‌ಗಳು, 2000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಳೆದ ವಾರ 500ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಅಕ್ರಮ ಮನೆಗಳ ಸಮೀಕ್ಷೆ ನಡೆಸಿ ತೆರವು ಕಾರ್ಯ ಆರಂಭಿಸಿದ್ದರು.

ಭಾರತದ ಜತೆ ವ್ಯಾಪಾರ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ: ಅಧ್ಯಕ್ಷ ಟ್ರಂಪ್‌ ವಿಶ್ವಾಸ

ನ್ಯೂಯಾರ್ಕ್‌/ವಾಷಿಂಗ್ಟನ್‌: ಭಾರತದ ಮೇಲೆ ಅಮೆರಿಕ ಹೇರಿದ್ದ ಶೇ.26ರಷ್ಟು ತೆರಿಗೆಗೆ 90 ದಿನಗಳ ಅಲ್ಪವಿರಾಮ ದೊರಕಿರುವ ಹೊತ್ತಿನಲ್ಲಿ, ‘ಉಭಯದೇಶಗಳ ನಡುವೆ ನಡೆಯುತ್ತಿರುವ ವ್ಯಾಪಾರ ಮಾತುಕತೆ ಉತ್ತಮವಾಗಿ ಸಾಗುತ್ತಿದೆ. ಈ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾವು ಅಧ್ಯಕ್ಷ ಗಾದಿಗೇರಿ 100 ದಿನದ ಸಂಭ್ರಮದಲ್ಲಿರುವ ಟ್ರಂಪ್‌, ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯನ್ನು ನೆನಪಿಸಿಕೊಂಡು, ‘ಅವರುಒಪ್ಪಂದ ಮಾಡಿಕೊಳ್ಳಲು ಬಯಸಿದ್ದರು. ಏನಾಗುತ್ತದೆಯೋ ನೋಡೋಣ’ ಎಂದರು.

ಇನ್‌ಸ್ಟಾ ಫಾಲೋವರ್ಸ್ ಕುಸಿದ ಖಿನ್ನತೆಯಿಂದ ಯುವತಿ ಆತ್ಮಹತ್ಯೆ

ಮುಂಬೈ: ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಮಿಶಾ ಅಗರ್ವಾಲ್ ತಮ್ಮ 25ನೇ ಜನ್ಮದಿನಕ್ಕೆ 2 ದಿನ ಮುಂಚೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಶಿಯಲ್ ಮೀಡಿಯಾ ಫಾಲೋವರ್ಸ್ ಕಡಿಮೆಯಾಗಿದ್ದರಿಂದ ಖಿನ್ನತೆಗೆ ಒಳಗಾಗಿ ಆಕೆ ಸಾವಿಗೆ ಶರಣಾಗಿದ್ದಾಳೆ ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ‘ಮಿಶಾ ಸೋಶಿಯಲ್ ಮೀಡಿಯಾದಲ್ಲೇ ತನ್ನ ಭವಿಷ್ಯ ಕಂಡುಕೊಂಡಿದ್ದಳು. 10 ಲಕ್ಷ ಫಾಲೋವರ್ಸ್ ಗಳಿಸಬೇಕೆಂದು ಅಪಾರ ಆಸೆ ಇಟ್ಟುಕೊಂಡಿದ್ದಳು. ಆದರೆ ಏಪ್ರಿಲ್‌ನಿಂದ ಆಕೆಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗುತ್ತಾ ಬಂದಿತ್ತು. ಇದೇ ಬೇಸರದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ’ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

₹2,000 ಕೋಟಿ ಶಾಲಾ ಅಕ್ರಮ: ಸಿಸೋಡಿಯಾ, ಜೈನ್ ವಿರುದ್ಧ ಪ್ರಕರಣ

ನವದೆಹಲಿ: ಸರ್ಕಾರಿ ಶಾಲೆಗಳ 12,748 ಕೊಠಡಿಗಳ ನಿರ್ಮಾಣದಲ್ಲಿ 2 ಸಾವಿರ ಕೋಟಿ ರು. ಭ್ರಷ್ಟಾಚಾರ ನಡೆಸಿರುವ ಆರೋಪದ ಮೇಲೆ ಆಮ್‌ ಆದ್ಮಿ ಪಕ್ಷದ ನಾಯಕರಾದ ಮನೀಶ್‌ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ಎಸಿಬಿ ಪ್ರಕರಣದ ದಾಖಲಿಸಿದೆ. ಮನೀಶ್‌ ಸಿಸೋಡಿಯಾ ಶಿಕ್ಷಣ ಸಚಿವರಾಗಿದ್ದಾಗ ಮತ್ತು ಸತ್ಯೇಂದ್ರ ಜೈನ್ ಲೋಕಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದಿರುವ ಹಗರಣ ಇದು ಎನ್ನಲಾಗಿದೆ. ಪಕ್ಷದ ಜೊತೆಗೆ ಸಂಬಂಧ ಹೊಂದಿರುವ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ತಲಾ 25 ಲಕ್ಷ ರು. ವೆಚ್ಚದಲ್ಲಿ 12,748 ಕೊಠಡಿ ನಿರ್ಮಿಸಲಾಗಿತ್ತು. ಆದರೆ ಇದು ಸಾಮಾನ್ಯ ವೆಚ್ಚಕ್ಕಿಂತ ಐದು ಪಟ್ಟು ಹೆಚ್ಚ. ಮಾತ್ರವಲ್ಲದೇ ನಿಗದಿತ ಅವಧಿಯಲ್ಲಿ ಕೆಲಸವೂ ಪೂರ್ಣಗೊಳಿಸಿದೆ ಕಳಪೆ ಗುಣಮಟ್ಟ ಹೊಂದಿರುವ ಕೊಠಡಿಗಳನ್ನು ನಿರ್ಮಿಸಿರುವ ಆರೋಪ ಈ ಇಬ್ಬರು ನಾಯಕ ಮೇಲಿ ಕೇಳಿ ಬಂದಿತ್ತು. ಈ ಸಂಬಂಧ ಎಸಿಬಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಕಬ್ಬಿನ ಎಫ್‌ಆರ್‌ಪಿ 4% ಹೆಚ್ಚಳ; ಪ್ರತಿ ಕ್ವಿಂಟಲ್‌ಗೆ ₹355 ನಿಗದಿ

ನವದೆಹಲಿ: ಕೇಂದ್ರ ಸರ್ಕಾರ 2025-26ನೇ ಸಾಲಿನ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಶೇ.4.41ರಷ್ಟು ಹೆಚ್ಚಿಸಿ ಕಬ್ಬು ಬೆಳೆಗಾರರಿಗೆ ಖುಷಿ ಸುದ್ದಿ ನೀಡಿದೆ. ಹೊಸ ದರದ ಪ್ರಕಾರ ಕ್ವಿಂಟಲ್‌ಗೆ 355 ರು. ದೊರೆಯಲಿದೆ. ಈ ವರ್ಷ ಅಕ್ಟೋಬರ್‌ನಿಂದ ಇದು ಜಾರಿಗೆ ಬರಲಿದೆ. ಕಬ್ಬು ಬೆಳೆಗಾರರ ​​ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ. 2024-25ನೇ ಸಾಲಿನಲ್ಲಿ ಕಬ್ಬಿನ ಎಫ್‌ಆರ್‌ಪಿ ಕ್ವಿಂಟಲ್‌ಗೆ 340 ರು. ಇತ್ತು.

ಅಸ್ಸಾಂ- ಮೇಘಾಲಯ ನಡುವೆ 22864 ಕೋಟಿ ವೆಚ್ಚದಲ್ಲಿ ಹೆದ್ದಾರಿಗೆ ಓಕೆ

ನವದೆಹಲಿ: 22,864 ಕೋಟಿ ರು. ವೆಚ್ಚದಲ್ಲಿ ಮೇಘಾಲಯದ ಮಾವ್ಲಿಂಗ್‌ಖುಂಗ್‌ನಿಂದ ಅಸ್ಸಾಂನ ಪಂಚಗ್ರಾಮ್‌ವರೆಗೆ 166.80 ಕಿ.ಮೀ. ಉದ್ದದ ಗ್ರೀನ್‌ಫೀಲ್ಡ್ ಹೈ-ಸ್ಪೀಡ್ ಹೆದ್ದಾರಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ‘ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಮೇಘಾಲಯದ ಮಾವ್ಲಿಂಗ್‌ಖುಂಗ್ (ಶಿಲ್ಲಾಂಗ್ ಬಳಿ)ನಿಂದ ಅಸ್ಸಾಂನ ಪಂಚಗ್ರಾಮ್ (ಸಿಲ್ಚಾರ್ ಬಳಿ)ವರೆಗಿನ ರಾಷ್ಟ್ರೀಯ ಹೆದ್ದಾರಿ-6ರ ಅಭಿವೃದ್ಧಿ, ನಿರ್ವಹಣೆ ಮತ್ತು ನಿರ್ವಹಣೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ. ಯೋಜನೆಯು 166.80 ಕಿ.ಮೀ. ಉದ್ದವಿರಲಿದ್ದು, 22,864 ಕೋಟಿ ರು. ಬಂಡವಾಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ’ ಎಂದು ಸರ್ಕಾರ ತಿಳಿಸಿದೆ.

ಸಿಐಎಸ್‌ಸಿಇ 10, 12ನೇ ಕ್ಲಾಸ್‌ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ

ನವದೆಹಲಿ: ಕೌನ್ಸಿಲ್ ಫಾರ್‌ ದಿ ಇಂಡಿಯನ್ ಸ್ಕೂಲ್‌ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ (ಸಿಐಎಸ್‌ಸಿಇ) ಮಂಡಳಿಯು ಪ್ರಸ್ತಕ ಸಾಲಿನ 10,12 ತರಗತಿಯ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಿದೆ. ಈ ಬಾರಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 10,12ನೇ ತರಗತಿ ಫಲಿತಾಂಶದಲ್ಲಿ ಶೇ.99.45ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದರೆ, ಶೇ. 98.64 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಐಸಿಎಸ್‌ಇ 10 ನೇ ತರಗತಿ ಲಿಖಿತ ಪರೀಕ್ಷೆಯು 67 ವಿಷಯಗಳಲ್ಲಿ ನಡೆದಿತ್ತು. 12 ತರಗತಿ ಐಎಸ್‌ಸಿ ಪರೀಕ್ಷೆಯು ಒಟ್ಟು 47 ವಿಷಯಗಳಲ್ಲಿ ನಡೆಸಲಾಗಿತ್ತು. ಜುಲೈನಲ್ಲಿ ಸುಧಾರಣಾ ಪರೀಕ್ಷೆಗಳು ನಡೆಯಲಿದೆ.