ದೇಶಾದ್ಯಂತ ವಾರ್‌ ಸೈರನ್‌ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್‌ ಆಗಿರಿ

| N/A | Published : May 07 2025, 12:47 AM IST / Updated: May 07 2025, 09:13 AM IST

ದೇಶಾದ್ಯಂತ ವಾರ್‌ ಸೈರನ್‌ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್‌ ಆಗಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಯುದ್ಧದ ಸೈರನ್‌ ಮೊಳಗಲಿದೆ... ಆಗ ಗಮನವಿಟ್ಟು ಕೇಳಿಸಿಕೊಂಡು ಕಟ್ಟೆಚ್ಚರ ವಹಿಸಿ... ಯುದ್ಧ ಘೋಷಣೆ ಆದಾಗ ಏನು ಮಾಡಬೇಕೆಂದು ತಿಳಿದುಕೊಳ್ಳಿ..

ನವದೆಹಲಿ: ಬುಧವಾರ ಯುದ್ಧದ ಸೈರನ್‌ ಮೊಳಗಲಿದೆ... ಆಗ ಗಮನವಿಟ್ಟು ಕೇಳಿಸಿಕೊಂಡು ಕಟ್ಟೆಚ್ಚರ ವಹಿಸಿ... ಯುದ್ಧ ಘೋಷಣೆ ಆದಾಗ ಏನು ಮಾಡಬೇಕೆಂದು ತಿಳಿದುಕೊಳ್ಳಿ..

ಹೌದು... ಪಾಕಿಸ್ತಾನದ ಜತೆಗೆ ಯುದ್ಧದ ವಾತಾವರಣ ನಿರ್ಮಾಣ ಆಗಿರುವ ನಡುವೆಯೇ ದೇಶದ ಜನರು ಯುದ್ಧದ ಸಂದರ್ಭದಲ್ಲಿ ಹೇಗೆ ಜಾಗರೂಕರಾಗಿರಬೇಕು ಎಂಬ ಬಗ್ಗೆ ಅರಿವು ಮೂಡಿಸಲು ಕರ್ನಾಟಕ ಸೇರಿ ದೇಶದ ಒಟ್ಟು 244 ಜಿಲ್ಲೆಗಳ 259 ಸ್ಥಳಗಳಲ್ಲಿ ‘ಆಪರೇಷನ್‌ ಅಭ್ಯಾಸ್‌’ ಹೆಸರಿನಲ್ಲಿ ಬುಧವಾರ ಭದ್ರತಾ ಸನ್ನದ್ಧತಾ ಅಣಕು ತಾಲೀಮು ನಡೆಯಲಿದೆ. ಬುಧವಾರ ಬೆಂಗಳೂರು, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಯಬೇಕಿತ್ತು. ಅನಿವಾರ್ಯ ಕಾರಣಗಳಿಂದಾಗಿ ರಾಯಚೂರು, ಉತ್ತರ ಕನ್ನಡದ ಅಣಕು ತಾಲೀಮು ಮುಂದೂಡಿಕೆಯಾಗಿದೆ.

ಏ.22ರಂದು ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ಕಾರಣ ಈ ಕವಾಯತು ನಡೆಸಲಾಗುತ್ತಿದೆ. 1971ರ ನಂತರ ಈ ರೀತಿಯ ಕವಾಯತುಗಳು ಇದೇ ಮೊದಲು.

‘ಪ್ರತಿಕೂಲ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ನಾಗರಿಕರಿಗೆ ತರಬೇತಿ ನೀಡುವ ಗುರಿಯನ್ನು ಈ ಕವಾಯತು ಹೊಂದಿದೆ. ಈ ಕವಾಯತಿನಲ್ಲಿ ವಿವಿಧ ಜಿಲ್ಲಾ ಅಧಿಕಾರಿಗಳು, ನಾಗರಿಕ ರಕ್ಷಣಾ ವಾರ್ಡನ್‌ಗಳು/ಸ್ವಯಂಸೇವಕರು, ಗೃಹರಕ್ಷಕ ದಳ (ಸಕ್ರಿಯ / ಮೀಸಲು ಪಡೆ ಸ್ವಯಂಸೇವಕರು), ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರು, ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಈ ವೇಳೆ ಪ್ರತಿಕೂಲ ದಾಳಿಗೆ ಪ್ರತಿಕ್ರಿಯಿಸಲು ನಾಗರಿಕರಿಗೆ ತರಬೇತಿ ನೀಡಬೇಕು’ ಎಂದು ಗೃಹ ಸಚಿವಾಲಯವು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. 

2010ರಲ್ಲಿ 244 ಜಿಲ್ಲೆಗಳನ್ನು ನಾಗರಿಕ ರಕ್ಷಣಾ ಜಿಲ್ಲೆಗಳು ಎಂದು ಪರಿಗಣಿಸಲಾಗಿತ್ತು. ಇವುಗಳಲ್ಲಿನ 259 ಸ್ಥಳಗಳ ಮೇಲೆ ವಿಶೇಷ ಗಮನ ನೀಡಿ ತಾಲೀಮು ನಡೆಸಲಾಗುತ್ತದೆ. ಗಮನಾರ್ಹವಾಗಿ, ಈ 244 ಜಿಲ್ಲೆಗಳ 100ಕ್ಕೂ ಹೆಚ್ಚು ಸ್ಥಳಗಳನ್ನು ಹೆಚ್ಚು ಸೂಕ್ಷ್ಮವೆಂದು ಗುರುತಿಸಲಾಗಿದೆ. ವಿಶೇಷವಾಗಿ ಗಡಿಗಳಲ್ಲಿರುವ ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯದಂತಹ ರಾಜ್ಯಗಳಗೆ ಬಹು-ಅಪಾಯದ ಸನ್ನಿವೇಶಗಳನ್ನು ಎದುರಿಸುವ ಡ್ರಿಲ್ ನಡೆಸಲು ಸೂಚನೆ ನೀಡಲಾಗಿದೆ. 

ಅಣು ಹಾಗೂ ವಿವಿಧ ಪ್ರಮುಖ ಸ್ಥಾವರಗಳಲ್ಲೂ ತಾಲೀಮು ನಡೆಯಲಿದೆ.ಪೂರ್ವಭಾವಿ ಸಭೆಯಲ್ಲಿ ಲೋಪದೋಷ ಗುರುತು:ಮಂಗಳವಾರ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ರಾಷ್ಟ್ರವ್ಯಾಪಿ ಅಣಕು ಕವಾಯತಿಗೆ ಮುಂಚಿತವಾಗಿ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ನಾಗರಿಕ ರಕ್ಷಣಾ ಮುಖ್ಯಸ್ಥರು ಪಾಲ್ಗೊಂಡಿದ್ದರು. ‘ನಾವು ಸನ್ನದ್ಧತೆಯನ್ನು ಪರಿಶೀಲಿಸಿದೆವು. ಸರಿಪಡಿಸಬೇಕಾದ ಲೋಪದೋಷಗಳನ್ನು ಗುರುತಿಸಲಾಯಿತು’ ಎಂದು ಸಭೆಯ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರೊಬ್ಬರು ಹೇಳಿದ್ದಾರೆ.ಯಾವ ಸನ್ನದ್ಧತೆ ಪರಿಶೀಲನೆ?:

ಈ ಮೌಲ್ಯಮಾಪನವು ಅಸ್ತಿತ್ವದಲ್ಲಿರುವ ರಕ್ಷಣಾ ಉಪಕರಣಗಳು ಕಾರ್ಯನಿರ್ವಹಿಸುತ್ತಿವೆಯೇ ಅಥವಾ ದುರಸ್ತಿ ಅಗತ್ಯವಿದೆಯೇ ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ.ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರು ಹೇಗೆ ನಡೆದುಕೊಳ್ಳಬೇಕು ಎಂದು ತಾಲೀಮಿನ ವೇಳೆ ತಿಳಿಸಲಾಗುತ್ತದೆ. ವಾಯುದಾಳಿಯ ಸೈರನ್‌ಗಳಿಗೆ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸಬೇಕು? ವಾಯುದಾಳಿಯ ಅಪಾಯವಿದ್ದರೆ ವಿದ್ಯುತ್‌ ಕಡಿತ ಮಾಡಿ ವಾಹನ ಸಂಚಾರ ನಿಲ್ಲಿಸಲಾಗುತ್ತದೆ. ಈ ವೇಳೆ ನಾಗರಿಕರು ಹೇಗೆ ಸನ್ನದ್ಧರಾಗಿರಬೇಕು? ತಮ್ಮನ್ನು ತಾವು ಹೇಗೆ ಸ್ವಯಂರಕ್ಷಣೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಲಾಗುತ್ತದೆ.ಯುದ್ಧದ ವೇಳೆ ವ್ಯಾಪಕ ವಿದ್ಯುತ್‌ ಕಡಿತ ಆಗಬಹುದು. ಆಗ ಎಲೆಕ್ಟ್ರಾನಿಕ್‌ ಸಾಧನಗಳು ಕೂಡ ಕೆಲಸ ಮಾಡದೇ ಹೋಗಬಹುದು. ಈ ವೇಳೆ ಮನೆಗಳು ವೈದ್ಯಕೀಯ ಕಿಟ್‌ಗಳು, ಟಾರ್ಚ್‌ಗಳು, ಮೇಣದಬತ್ತಿಗಳು ಮತ್ತು ನಗದನ್ನು ಕೂಡಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

ಇಂದಿನ ತಾಲೀಮಿನಲ್ಲಿ ಏನಿರಲಿದೆ? 

ಎಚ್ಚರಿಕೆ ವ್ಯವಸ್ಥೆ ಪರಿಶೀಲನೆ:

ಸಾರ್ವಜನಿಕ ಎಚ್ಚರಿಕೆ ವ್ಯವಸ್ಥೆಗಳ ಪರೀಕ್ಷೆ ನಡೆಯಲಿದೆ. ಈ ವೇಳೆ ಸಾರ್ವಜನಿಕ ಸೂಚನಾ ಉದ್ದೇಶಗಳಿಗಾಗಿ ವಾಯುದಾಳಿ ಸೈರನ್‌ಗಳ ಕಾರ್ಯಾಚರಣೆ ನಡೆಸಲಾಗುತ್ತದೆ.

ಸಂವಹನ ಪರೀಕ್ಷೆ:

ಭಾರತೀಯ ವಾಯುಪಡೆಯೊಂದಿಗೆ ಹಾಟ್‌ಲಿಂಕ್ ಮತ್ತು ರೇಡಿಯೋ ಸಂವಹನವನ್ನು ಪರಿಶೀಲಿಸಲಾಗುತ್ತದೆ. ಏಕೆಂದರೆ ಯುದ್ಧದ ವೇಳೆ ಪಡೆಗಳ ಜತೆ ಇವುಗಳ ಮೂಲಕವೇ ಸಂವಹನ ನಡೆಯುತ್ತಿರುತ್ತದೆ.

ಕಂಟ್ರೋಲ್‌ ರೂಂ ಪರಿಶೀಲನೆ:

ತುರ್ತು ಸಮನ್ವಯಕ್ಕಾಗಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಗಳು ಹೇಗೆ ಕೆಲಸ ಮಾಡಬೇಕು ಎಂಬುದನ್ನು ಪರಿಶೀಲಿಸಲಾಗುತ್ತದೆ.ನಾಗರಿಕ ತರಬೇತಿ:

ರಕ್ಷಣಾ ತಜ್ಞರು ಯುದ್ಧದ ವೇಳೆ ನಾಗರಿಕರು ಹೇಗೆ ಸ್ವಯಂರಕ್ಷಣೆ ಮಾಡಿಕೊಳ್ಳಬೇಕು. ಹೇಗೆ ರಕ್ಷಣಾ ತಂತ್ರ ಅನುಸರಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಬ್ಲ್ಯಾಕೌಟ್ ತಂತ್ರಗಳು:

ವೈರಿ ದೇಶಗಳಿಗೆ ಸ್ಥಳಗಳ ಗುರುತು ಸಿಗಬಾರದು ಎಂದು ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತ ಮಾಡಲಾಗುತ್ತದೆ. ಈ ವೇಳೆ ಊರಿನ ವಿದ್ಯುತ್‌ ಅಲ್ಲದೆ, ರಾತ್ರಿ ವೇಳೆ ಹೆಡ್‌ಲೈಟ್‌ ಹಾಕಿ ಸಾಗುವ ವಾಹನ ಸಂಚಾರವನ್ನೂ ನಿಲ್ಲಿಸಲಾಗುತ್ತದೆ. ಇದರ ಪರೀಕ್ಷೆ ಈಗ ನಡೆಯಲಿದೆ.

ತುರ್ತು ಸೇವೆಗಳ ಸನ್ನದ್ಧತೆ:

ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ದಳಗಳು, ಪೊಲೀಸ್‌ ಪಡೆಗಳು, ವಿಪತ್ತು ನಿಗ್ರಹ ದಳಗಳು, ಆಸ್ಪತ್ರೆಗಳು ಹೇಗೆ ಸನ್ನದ್ಧವಾಗಿರಬೇಕು ಎಂಬುರ ಮೇಲ್ವಿಚಾರಣೆ ನಡೆಯಲಿದೆ.

ಸ್ಥಳಾಂತರ ಯೋಜನೆಗಳು:

ಯುದ್ಧದ ವೇಳೆ ಅಪಾಯದಲ್ಲಿ ಸಿಲುಕುವ ಜನರನ್ನು ಹೇಗೆ ಸ್ಥಳಾಂತರಿಸಬೇಕು. ಸ್ಥಳಾಂತರ ಸನ್ನದ್ಧತೆ ಹೇಗಿರಬೇಕು ಎಂಬುದರ ಅಣಕು ಕಾರ್ಯಾಚರಣೆಯು ತಾಲೀಮಿನ ಭಾಗವಾಗಿರಲಿದೆ.

- ದೇಶಾದ್ಯಂತ ವಾರ್‌ ಸೈರನ್‌ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ ಅಲರ್ಟ್‌ ಆಗಿರಿ- ಯುದ್ಧ ಘೋಷಣೆ ಆದಾಗ ನೀವೇನು ಮಾಡಬೇಕೆಂದು ಈಗಲೇ ಸರಿಯಾಗಿ ತಿಳಿದುಕೊಳ್ಳಿ- ಬೆಂಗಳೂರು ಸೇರಿದಂತೆ ದೇಶದ 259 ಸ್ಥಳಗಳಲ್ಲಿ ಆಪರೇಷನ್‌ ಅಭ್ಯಾಸ್‌ಗೆ ಭರದ ತಯಾರಿ

ಏನೇನು ನಡೆಯುತ್ತೆ?- ವಾಯು ದಾಳಿ ನಡೆದ ವೇಳೆ ಮೊಳಗಿಸಲಾಗುವ ಸೈರನ್‌ಗಳ ಕಾರ್ಯಾಚರಣೆಯನ್ನು ಪರೀಕ್ಷಿಸಲಾಗುತ್ತದೆ

- ಯುದ್ಧದ ವೇಳೆ ಯಾವ ರೀತಿ ರಕ್ಷಣೆ ಪಡೆಯಬೇಕು ಎಂದು ರಕ್ಷಣಾ ತಜ್ಞರು ಜನರಿಗೆ ಪೂರ್ಣ ಮಾಹಿತಿ ನೀಡುತ್ತಾರೆ

- ವೈರಿ ದೇಶದ ಯುದ್ಧ ವಿಮಾನಗಳಿಗೆ ಸ್ಥಳ ಗುರುತು ಸಿಗಬಾರೆಂದು ವಿದ್ಯುತ್‌ ದೀಪ ಬಂದ್‌ ಮಾಡಿಸಲಾಗುತ್ತದೆ- ಭಾರತೀಯ ವಾಯುಪಡೆ ಜತೆಗಿನ ಹಾಟ್‌ಲಿಂಕ್‌, ರೇಡಿಯೋ ಸಂವಹನವನ್ನು ಪರಿಶೀಲನೆ ಮಾಡಲಾಗುತ್ತದೆ- ತುರ್ತು ಸಮನ್ವಯಕ್ಕಾಗಿ ನಿಯಂತ್ರಣ ಕೊಠಡಿಗಳು ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಪಾಸಿಸಲಾಗುತ್ತೆ- ಅಗ್ನಿಶಾಮಕ ದಳ, ಪೊಲೀಸ್‌ ಪಡೆ, ವಿಪತ್ತು ನಿರ್ವಹಣಾ ಪಡೆ, ಆಸ್ಪತ್ರೆಗಳ ಸನ್ನದ್ಧತೆ ಪರಿಶೀಲಿಸಲಾಗುತ್ತದೆ- ಯುದ್ಧದ ವೇಳೆ ಅಪಾಯಕ್ಕೆ ಸಿಲುಕುವ ಜನರನ್ನು ಹೇಗೆ ಸ್ಥಳಾಂತರಿಸಬೇಕು ಎಂಬುದರ ತಾಲೀಮು ನಡೆಯಲಿದೆ

ಉತ್ತರ ಕನ್ನಡ,

ರಾಯಚೂರಲ್ಲಿ

ಇಂದು ಇಲ್ಲ

- ಬೆಂಗಳೂರಲ್ಲಿ ಮಾತ್ರ ಡ್ರಿಲ್‌

ಕೈಗಾ ಅಣುಸ್ಥಾವರವನ್ನು ಹೊಂದಿರುವ ಉತ್ತರ ಕನ್ನಡ, ಉಷ್ಣವಿದ್ಯುತ್‌ ಸ್ಥಾವರಗಳು ಇರುವ ರಾಯಚೂರಿನಲ್ಲೂ ಬುಧವಾರ ಯುದ್ಧದ ಅಣಕು ತಾಲೀಮು ನಡೆಯಬೇಕಿತ್ತು. ಆದರೆ ಅದನ್ನು ಕಡೇ ಕ್ಷಣದಲ್ಲಿ ಮುಂದೂಡಲಾಗಿದೆ. ಬೆಂಗಳೂರಲ್ಲಿ ಮಾತ್ರ ಬುಧವಾರ ಅಣಕು ಡ್ರಿಲ್‌ ನಡೆಯಲಿದೆ.