ಸಾರಾಂಶ
ಶ್ರೀನಗರ: ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೂವರೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ನಿಮ್ಮ ದಿಟ್ಟ ಮತ್ತು ಸೈದ್ಧಾಂತಿಕ ನಿಲುವು ಎಲ್ಲರ ಪಾಲಿಗೆ ಭರವಸೆಯ ಬೆಳಕಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಮೆಹಬೂಬಾ , ‘ಇಂದಿನ ಭಾರತದಲ್ಲಿ ವಿರೋಧದ ಧ್ವನಿಯನ್ನು ಅಪರಾಧವೆಂಬಂತೆ ನೋಡಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಧ್ವನಿಗಳು ನೆಮ್ಮದಿಯ ನಿಟ್ಟುಸಿರು ಮೂಡುವಂತೆ ಮಾಡಿದೆ. ಕಳೆದೊಂದು ದಶಕದಿಂದ ಭಾರತದ ಬಹುಸಂಖ್ಯಾತವಾದವು ದೇಶದ ಮೂಲ ಮೌಲ್ಯಗಳಾದ ವೈವಿಧ್ಯತೆ ಮತ್ತು ಬಹುತ್ವಕ್ಕೆ ಬೆದರಿಕೆಯೊಡ್ಡುತ್ತಿದೆ. ಹೆಚ್ಚಿನ ನಾಗರಿಕರು ಈ ಅಜೆಂಡಾವನ್ನು ತಿರಸ್ಕರಿಸಿದರೂ ಈಗ, ದ್ವೇಷ ಮತ್ತು ವಿಭಜನೆಗೆ ಉತ್ತೇಜಿಸುವವರೇ ಅಧಿಕಾರದಲ್ಲಿದ್ದಾರೆ. ಸಂವಿಧಾನ, ಸಂಸ್ಥೆಗಳು ಮತ್ತು ಜಾತ್ಯತೀತ ಚೌಕಟ್ಟನ್ನು ಅವರು ಗುರಿ ಮಾಡುತ್ತಿದ್ದಾರೆ. ಇದರ ಬಿಸಿಯನ್ನು ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಮುಸ್ಲಿಮರು ಅನುಭವಿಸಬೇಕಾಗಿದೆ. ವಕ್ಫ್ ತಿದ್ದುಪಡಿ ವಿಧೇಯಕವು ನಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಕಡೆಗಣಿಸುತ್ತದೆ’ ಎಂದಿದ್ದಾರೆ.