ಮೊಹೆಂಜೋದಾರೋದಲ್ಲಿ 50 ಡಿ.ಸೆ ಉಷ್ಣಾಂಶ!

| Published : May 24 2024, 12:48 AM IST / Updated: May 24 2024, 06:17 AM IST

ಸಾರಾಂಶ

ಕಳೆದ ತಿಂಗಳಷ್ಟೇ ಅತಿವೃಷ್ಟಿಯಿಂದ ಅಪಾರ ನಷ್ಟ ಅನುಭವಿಸುತ್ತಿದ್ದ ಪಾಕಿಸ್ತಾನಕ್ಕೆ ಈಗ ಅನಾವೃಷ್ಟಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇಸ್ಲಮಾಬಾದ್: ಕಳೆದ ತಿಂಗಳಷ್ಟೇ ಅತಿವೃಷ್ಟಿಯಿಂದ ಅಪಾರ ನಷ್ಟ ಅನುಭವಿಸುತ್ತಿದ್ದ ಪಾಕಿಸ್ತಾನಕ್ಕೆ ಈಗ ಅನಾವೃಷ್ಟಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಾಕಿಸ್ತಾನದಲ್ಲಿ ಉಷ್ಣಹವೆ ವಿಪರೀತವಾಗಿದ್ದು, ಗುರುವಾರ ಪ್ರಸ್ತುತ ಬೇಸಿಗೆಯ ಅತ್ಯಂತ ಗರಿಷ್ಠ ಪ್ರಮಾಣದ ಬಿಸಿಲ ತಾಪವುಳ್ಳ ದಿನವಾಗಿ ದಾಖಲಾಗಿದೆ.

 ಸಿಂಧ್‌ ಪ್ರಾಂತ್ಯದ ಹರಪ್ಪ ನಾಗರಿಕತೆಯ ಪುರಾತನ ನಗರ ಮೊಹೆಂಜೊದಾರೋದಲ್ಲಿ ಬರೋಬ್ಬರಿ 50 ಡಿಗ್ರಿ ಸೆಲ್ಶಿಯಸ್‌ ತಾಪಮಾನ ದಾಖಲಾಗಿದೆ. ಹೀಗಾಗಿ ಬುಧವಾರ ದಾಖಲಾಗಿದ್ದ ತನ್ನದೇ 49 ಡಿಗ್ರಿ ತಾಪಮಾನದ ದಾಖಲೆ ಮುರಿದು ಮುನ್ನುಗ್ಗುತ್ತಿದೆ.ಇ ದರ ಜೊತೆಗೆ ಸಿಂಧ್‌ ಹಾಗೂ ಬಲೂಚಿಸ್ತಾನದ ಬಹುತೇಕ ಕಡೆ 48 ಡಿಗ್ರಿ, ಪಂಜಾಬ್‌ ಪ್ರಾಂತ್ಯದಲ್ಲಿ 47 ಡಿಗ್ರಿ ದಾಖಲಾಗಿದೆ. ಅಲ್ಲದೆ ಬಿಸಿಲ ತಾಪಕ್ಕೆ ಪಾಕ್‌ ಜನರಿಗೆ ಹೀಟ್‌ಸ್ಟ್ರೋಕ್‌ ಆಗಿ ನೂರಾರು ಮಂದಿ ಆಸ್ಪತ್ರೆ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜನರಿಗೆ ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರುವಂತೆ ಸೂಚಿಸಿದೆ.

ಅಲ್ಲದೆ ದೇಶಾದ್ಯಂತ ಹೀಟ್‌ಸ್ಟ್ರೋಕ್‌ ಆದ ಜನರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ಗಳು ನೀರಿನ ಬಾಟಲ್‌ ಜೊತೆಗೆ ಐಸ್‌ ಕೂಲರ್‌ಗಳನ್ನೂ ಹೊತ್ತೊಯ್ಯುತ್ತಿರುವುದು ಕಂಡು ಬಂದಿದೆ. ಈ ಉಷ್ಣಹವೆ ಇನ್ನೂ ಒಂದು ವಾರಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ.