ಸಾರಾಂಶ
ಹಾಸ್ಟೆಲ್ ಆವರಣದಲ್ಲಿ ರಮ್ಜಾನ್ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಇಲ್ಲಿನ ಗುಜರಾತ್ ವಿವಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಅಹಮದಾಬಾದ್: ಹಾಸ್ಟೆಲ್ ಆವರಣದಲ್ಲಿ ರಮ್ಜಾನ್ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಇಲ್ಲಿನ ಗುಜರಾತ್ ವಿವಿಯಲ್ಲಿ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಈ ಪೈಕಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಶ್ರೀಲಂಕಾ ಮತ್ತು ತಜಕಿಸ್ತಾನ ಮೂಲದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಈ ನಡುವೆ ದಾಳಿ ಸಂಬಂಧ 25 ವಿದ್ಯಾರ್ಥಿಗಳ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಕೂಡಾ ದಾಳಿಕೋರರ ವಿರುದ್ಧ ಗುಜರಾತ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದೆ.ಏನಾಯ್ತು?:
ವಿವಿಧ ದೇಶಗಳ ವಿದ್ಯಾರ್ಥಿಗಳನ್ನು ಒಳಗೊಂಡ ಗುಂಪೊಂದು ಶನಿವಾರ ರಾತ್ರಿ ಹಾಸ್ಟೆಲ್ ಕ್ಯಾಂಪಸ್‌ನಲ್ಲಿ ನಮಾಜ್ ಮಾಡುತ್ತಿತ್ತು. ಈ ವೇಳೆ ಹೊರಗಿನಿಂದ ಬಂದ ಗುಂಪೊಂದು ಕ್ಯಾಂಪಸ್‌ನೊಳಗೆ ನಮಾಜ್ ಮಾಡದಂತೆ ಸೂಚಿಸಿದೆ. ಈ ವೇಳೆ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸುದ್ದಿ ಬಾಯಿಂದ ಬಾಯಿಗೆ ಹಬ್ಬಿ 200ಕ್ಕೂ ಹೆಚ್ಚು ಜನರ ಗುಂಪು 5 ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಶ್ರೀಲಂಕಾ, ತಜಕಿಸ್ತಾನ, ಉಜ್ಬೇಕಿಸ್ತಾನ, ಆಫ್ಘಾನಿಸ್ತಾನ, ತುರ್ಕೇಮೆನಿಸ್ತಾನ ವಿದ್ಯಾರ್ಥಿಗಳೂ ಗಾಯಗೊಂಡಿದ್ದಾರೆ.