ಸಾರಾಂಶ
ಅಯೊಧ್ಯೆ: ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ನಡೆಸಿಕೊಡಲಿರುವ ಪ್ರಧಾನಿ ನರೇಂದ್ರ ಮೋದಿ, ಜ.21ರಂದೇ ಅಯೋಧ್ಯೆಗೆ ಆಗಮಿಸಲಿದ್ದಾರೆ.
ಈ ಮೊದಲು ಜ.22ರ ಮುಂಜಾನೆ 11 ಗಂಟೆ ವೇಳೆ ಮೋದಿ ಅಯೋಧ್ಯೆಗೆ ಆಗಮಿಸುವ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿತ್ತು. ಆದರೆ ಉತ್ತರ ಭಾರತದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ವಿಮಾನ ವಿಳಂಬ ಆಗಬಹುದಾಗಿದೆ. ಹೀಗಾಗಿ 1 ದಿನ ಮುಂಚಿತವಾಗಿಯೇ ಮೋದಿ ಆಗಮಿಸಲಿದ್ದು, ಜ.21ರಂದು ಅಯೋಧ್ಯೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜ.22ಕ್ಕೆ ಮೋದಿಯಿಂದ ಪ್ರಾಣಪ್ರತಿಷ್ಠಾಪನೆ: ಇನ್ನು ಜ.21ರಂದು ಅಯೋಧ್ಯೆಗೆ ಆಗಮಿಸುವ ಮೋದಿ, ಜ.22ರಂದು ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿರುವ ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.
ಇದಾದ ಬಳಿಕ ಮೋದಿ, ಕಳಸದಲ್ಲಿ ಸರಯೂ ನದಿ ನೀರು ತೆಗೆದುಕೊಂಡು, ಮಂದಿರದ ಗರ್ಭಗುಡಿಗೆ ಹೋಗಲಿದ್ದಾರೆ. ಬಳಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಮುಖ್ಯ ಯಜಮಾನರಾಗಿ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.