ಪ್ರಯಾಗರಾಜ್‌ದಲ್ಲಿ ನಡೆಯುವ ಮಹಾ ಕುಂಭಮೇಳ ಏಕತೆಯ ಮಹಾಯಜ್ಞ : ಪ್ರಧಾನಿ ನರೇಂದ್ರ ಮೋದಿ

| Published : Dec 14 2024, 12:49 AM IST / Updated: Dec 14 2024, 04:47 AM IST

ಸಾರಾಂಶ

ಪ್ರಯಾಗರಾಜ್‌ದಲ್ಲಿ ನಡೆಯುವ ಮಹಾ ಕುಂಭಮೇಳವು ಏಕತೆಯ ಮಹಾಯಜ್ಞವಾಗಿದೆ. ವಿಕಸಿತ ಭಾರತದ ಕನಸನ್ನು ನನಸು ಮಾಡುವಲ್ಲಿ ಮಹಾ ಕುಂಭಮೇಳವು ತನ್ನದೇ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ ಸ್ಥಾನವನ್ನು ಮಹಾಕುಂಭ ಸ್ಥಾಪಿಸಲಿದೆ ಎಂದು ಭವಿಷ್ಯ ನುಡಿದರು.

ಶಿವಾನಂದ ಗೊಂಬಿ

 ಪ್ರಯಾಗರಾಜ್ (ಉ.ಪ್ರ.)ಪ್ರಯಾಗರಾಜ್‌ದಲ್ಲಿ ನಡೆಯುವ ಮಹಾ ಕುಂಭಮೇಳವು ಏಕತೆಯ ಮಹಾಯಜ್ಞವಾಗಿದೆ. ವಿಕಸಿತ ಭಾರತದ ಕನಸನ್ನು ನನಸು ಮಾಡುವಲ್ಲಿ ಮಹಾ ಕುಂಭಮೇಳವು ತನ್ನದೇ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ ಸ್ಥಾನವನ್ನು ಮಹಾಕುಂಭ ಸ್ಥಾಪಿಸಲಿದೆ ಎಂದು ಭವಿಷ್ಯ ನುಡಿದರು.

ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಗಂಗಾ, ಯಮನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮ ಸ್ಥಳವಾದ ಸಂಗಮನಗರಿಯಲ್ಲಿ ಬರೋಬ್ಬರಿ ₹ 5500 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡೆ ಹನುಮಾನ ಮಂದಿರದ ಪಕ್ಕದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ 30 ನಿಮಿಷ ಭಾಷಣ ಮಾಡಿದರು ಮೋದಿ.

ಹೊಸ ಇತಿಹಾಸ ಸೃಷ್ಟಿ:ಮಹಾಕುಂಭ ಮೇಳದ ಇತಿಹಾಸ ವಿವರಿಸುತ್ತಲೇ ಈ ಮಹಾಕುಂಭ ಮೇಳ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತದೆ. ಭಕ್ತಿ, ಧರ್ಮ, ಜ್ಞಾನದ ಸಮಾಗಮವಾಗಲಿದೆ. ಮಹಾಕುಂಭಮೇಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ನಮ್ಮ ಸಂಸ್ಕತಿ, ಸನಾತನ ಸಂಪ್ರದಾಯದ ಪ್ರತೀಕವಾಗಿದೆ. ದಿವ್ಯ, ಭವ್ಯ ಹಾಗೂ ಡಿಜಿಟಲ್ ಮಹಾಕುಂಭವಾಗಲಿದೆ. ಸ್ವಚ್ಛ-ಶುದ್ಧ ಮಹಾಕುಂಭವನ್ನಾಗಿ ಮಾಡೋಣ. ಇದಕ್ಕಾಗಿ ಎಲ್ಲರೂ ಸಂಕಲ್ಪ ಮಾಡೋಣ ಎಂದು ನೆರೆದ ಜನತೆಗೆ ಕರೆ ನೀಡಿದರು. ಅಲ್ಲದೇ, ಕುಂಭ ಮೇಳದ‌ ಯಶಸ್ಸಿಗಾಗಿ ಶ್ರಮಿಸುತ್ತಿರುವ ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು ಎಂದು ನುಡಿದರು.ಈ ಸಲದ ಕುಂಭಮೇಳದ ಇಡೀ ಜಗತ್ತಿನಲ್ಲೇ ಚರ್ಚೆಯಾಗುತ್ತದೆ. ಮಹಾಕುಂಭಮೇಳದಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಲಿದೆ. ಭಾರತದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿದೆ ಎಂದರು.

ಭಾರತದ ಡಿಜಿಟಲ್ ತಂತ್ರಜ್ಞಾನಕ್ಕೆ ಬೇಡಿಕೆ ಬಂದಿದೆ. ವಿದೇಶಗಳಲ್ಲಿ ಭಾರತದ ಬಗ್ಗೆ ಅಭಿಪ್ರಾಯ ಬದಲಾಗಿದೆ. ಮೇಳಕ್ಕೆ ಬರುವ ಶ್ರದ್ಧಾಳುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಸ್ಥಳೀಯ ಆಡಳಿತದ್ದಾಗಿದ್ದು ಸಮರ್ಥವಾಗಿ ನಿರ್ವಹಿಸುತ್ತಿದೆ. ಸ್ವಚ್ಛತೆಗಾಗಿ 15000 ಪೌರಕಾರ್ಮಿಕರು ಶ್ರಮಿಸಲಿದ್ದಾರೆ. ಇದಕ್ಕಾಗಿ ಅವರಿಗೆ ಕೋಟಿ ಕೋಟಿ ನಮನಗಳು. ಅಲ್ಲದೇ ನಿಮ್ಮ ಕಾರ್ಯ ಬಹುದೊಡ್ಡದು. ಹಿಂದೆ ನಿಮ್ಮ(ಪೌರಕಾರ್ಮಿಕರ) ಪಾದಪೂಜೆ ಮಾಡಿದ್ದೆ. ಆಗ ಸಿಕ್ಕ ಸಂತೋಷ, ಖುಷಿ ನನ್ನ ನೆನಪಲ್ಲಿ ಸದಾಕಾಲ ಇರುತ್ತದೆ ಎಂದರು.

ಭೂಮಿಯ ಪಾವಿತ್ರ್ಯತೆ ಹೆಚ್ಚಳ: ಗಂಗಾ, ಯಮುನಾ, ಸರಸ್ವತಿ, ಕಾವೇರಿ ಮತ್ತು ನರ್ಮದಾ ಸೇರಿದಂತೆ ಅನೇಕ ಪುಣ್ಯ ನದಿಗಳಿರುವ ಪವಿತ್ರ ಭೂಮಿಯಾಗಿದೆ ಭಾರತ. ಮೇಳಕ್ಕೆ ಬರುವ ಸಾಧು ಸಂತರು, ಸಾಧಕರಿಂದ ಈ ಭೂಮಿಯ ಪಾವಿತ್ರ್ಯತೆ ಮತ್ತಷ್ಟು ಹೆಚ್ಚಲಿದೆ. ಪ್ರಯಾಗರಾಜ್ ನ ಉಲ್ಲೇಖವಿಲ್ಲದೇ ಪುರಾಣಗಳು ಕೂಡ ಅಪೂರ್ಣ ಎಂದರು.

ಮನುಷ್ಯನ ಆಂತರಿಕ ಚೇತನ ಜಾಗೃತವಾಗುತ್ತದೆ. ಸಂತ, ಮಹಾಂತ, ಋಷಿ,‌ ಮುನಿ, ಸಾಮಾನ್ಯ ಮನುಷ್ಯ ಎಲ್ಲರೂ ಒಂದೇ ಕಾಲದಲ್ಲಿ ಸಂಗಮ ತಟದಲ್ಲಿ ಸಾಮೂಹಿಕ ಪುಣ್ಯಸ್ನಾನ ಮಾಡಲಿದ್ದಾರೆ. ಅದರ ಸಾಮೂಹಿಕ ಶಕ್ತಿ ಸಕಾರಾತ್ಮಕತೆ ಸೃಷ್ಟಿಸಲಿದೆ. ಜತೆಗೆ ಜಾತಿ, ಮತ, ಭಾಷೆ, ಭೇದ-ಭಾವಗಳನ್ನು ಕಿತ್ತೆಸೆದು ಎಲ್ಲರೂ ಒಂದೇ ಎಂಬ ಏಕತಾ ಭಾವನೆಯನ್ನು ಸೃಷ್ಟಿಸುತ್ತದೆ. ಹೀಗಾಗಿಯೇ ಮಹಾಕುಂಭ ಮೇಳವನ್ನು ಏಕತೆಯ ಮಹಾಯಜ್ಞ ಎಂದು ನಾನು ಕರೆಯುತ್ತೇನೆ. ಏಕ ಭಾರತ ಶ್ರೇಷ್ಠ ಭಾರತದ ಘೋಷ ವಾಕ್ಯಕ್ಕೆ ನಾಂದಿ ಹಾಡಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಯಾಗರಾಜ್ ಜನರ ಹೃದಯ ವೈಶಾಲ್ಯತೆ ನನ್ನ ಮನಸ್ಸನ್ನು ಗೆದ್ದಿದೆ. ಈ ಮೇಳ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಮುನ್ನುಡಿ ಬರೆಯಲಿದೆ. ಮಹಾಕುಂಭ ಮೇಳವು ಆರ್ಥಿಕತೆ ಸುಭದ್ರತೆಗೂ ಒತ್ತು‌ ನೀಡುತ್ತದೆ. ಇಲ್ಲಿನ ವಾಣಿಜ್ಯ-ವಹಿವಾಟು ಬೆಳೆಯುತ್ತದೆ. ಆದರೆ, ಹಿಂದಿನ‌ ಸರ್ಕಾರಗಳು ಇಂತಹ ಮಹಾನ್ ಕುಂಭಮೇಳವನ್ನು ನಿರ್ಲಕ್ಷಿಸಿದ್ದವು. ಸೇರುವ ಭಕ್ತರಿಗೆ ಸೌಲಭ್ಯ ಸರಿಯಾಗಿ ಕೊಡುತ್ತಿರಲಿಲ್ಲ. ಆದರೆ, ನಮ್ಮ ಡಬಲ್ ಎಂಜಿನ್ ಸರ್ಕಾರ ಮಹಾಕುಂಭ ಮೇಳದ ಬಗ್ಗೆ ಕಿಂಚಿತ್ತೂ ನಿರ್ಲಕ್ಷ್ಯ ಮಾಡಿಲ್ಲ.‌ ಸಕಲ ಸೌಲಭ್ಯ ನೀಡಲು ಪಣ ತೊಟ್ಟಿದೆ. ಇಲ್ಲಿಗೆ ಬರುವಂತಹ ಕೋಟ್ಯಂತರ ಜನರಿಗೆ ಒಂದೇ ಒಂದು ಸಣ್ಣ ಕೊರತೆಯು ಆಗದಂತೆ ಸೌಲಭ್ಯ ನೀಡಲಿದೆ ಎಂದರು.

ವಿರಾಸತ್ ಭಾರತದ ಗುರಿ:ನಮ್ಮ ಸರ್ಕಾರ ವಿಕಸಿತ ಭಾರತದ ಗುರಿಯನ್ನಷ್ಟೇ ಇಟ್ಟುಕೊಂಡಿಲ್ಲ, ವಿರಾಸತ್ ಭಾರತದ ಗುರಿ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಮಾಯಣ ಸರ್ಕಿಟ್, ಶ್ರೀಕೃಷ್ಣ ಸರ್ಕಿಟ್ ಸೇರಿದಂತೆ ಹಲವು ಆಧ್ಯಾತ್ಮಿಕ ಕೇಂದ್ರಗಳ ಅಭಿವೃದ್ದಿಗೂ ಒತ್ತು ನೀಡಿದ್ದೇವೆ ಎಂದು‌ ತಿಳಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವಾಗತಿಸಿದರು. ಉತ್ತರ ಪ್ರದೇಶ ಸರ್ಕಾರದ ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಇದ್ದರು.

ಕುಂಭಮೇಳ ಯಾವಾಗ?

ಮುಂದಿನ ವರ್ಷ ಜ.13ರಿಂದ ಫೆ.26ರ ವರೆಗೆ ಮಹಾ ಕುಂಭಮೇಳ ನಡೆಯಲಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಜಾತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಮೇಳಕ್ಕೆ 5500 ಕೋಟಿ ರು. ಕಾಮಗಾರಿಮಹಾಕುಂಭ ಮೇಳವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್‌ರಾಜ್‌ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ 5500 ಕೋಟಿ ರು. ವೆಚ್ಟದ 167 ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಇದರ ಜತೆಗೆ, ಭಾರಧ್ವಜ ಆಶ್ರಮ ಕಾರಿಡಾರ್‌, ಶೃಂಗವೇರ್ಪುರ್‌ ಧಾಮ ಕಾರಿಡಾರ್‌, ಅಕ್ಷಯ್‌ವಟ್‌ ಕಾರಿಡಾರ್‌ ಮತ್ತು ಹನುಮಾನ್‌ ಮಂದಿರ್‌ ಕಾರಿಡಾರ್‌ಗಳಿಗೂ ಮೋದಿಯಿಂದ ಚಾಲನೆ ಪಡೆಯಿತು.

ಭಕ್ತರಿಗೆ ಮಾಹಿತಿ ನೀಡುವ ಚಾಟ್‌ಬಾಟ್‌

ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಭಕ್ತರ ಜತೆ ಸುಲಭವಾಗಿ ಸಂವಹನ ಸಾಧ್ಯವಾಗುವಂತೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಆಧಾರಿತವಾಗಿ ರೂಪಿಸಲಾಗಿರುವ ಮಹಾಕುಂಭ ‘ಸಹಾ ಯಕ್‌’ (Sah''''''''''''''''AI''''''''''''''''yak) ಚಾಟ್‌ಬಾಟ್‌ ಅನ್ನೂ ಇದೇ ಸಂದರ್ಭದಲ್ಲಿ ಮೋದಿ ಅವರು ಲೋಕಾರ್ಪಣೆ ಮಾಡಿದರು.