ಹೊಸ ಸರ್ಕಾರದ ಕೆಲಸಕ್ಕೆ ಮೋದಿ ಈಗಲೇ ತಯಾರಿ!

| Published : Feb 25 2024, 01:46 AM IST / Updated: Feb 25 2024, 10:28 AM IST

modi

ಸಾರಾಂಶ

ಈ ಬಾರಿ ಎನ್‌ಡಿಎ ಮೈತ್ರಿಕೂಟ 400 ಸೀಟು ಗೆಲ್ಲುವುದು ಖಚಿತ ಎಂದು ಹಲವು ದಿನಗಳಿಂದ ವಿಶ್ವಾಸ ವ್ಯಕ್ತಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೊದಲ 100 ದಿನಗಳಲ್ಲಿ ಏನೇನು ಮಾಡಬೇಕು ಎಂಬುದಕ್ಕೂ ಸಿದ್ಧತೆ ಆರಂಭಿಸಿದ್ದಾರೆ.

ಪಿಟಿಐ ನವದೆಹಲಿ

ಈ ಬಾರಿ ಎನ್‌ಡಿಎ ಮೈತ್ರಿಕೂಟ 400 ಸೀಟು ಗೆಲ್ಲುವುದು ಖಚಿತ ಎಂದು ಹಲವು ದಿನಗಳಿಂದ ವಿಶ್ವಾಸ ವ್ಯಕ್ತಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೊದಲ 100 ದಿನಗಳಲ್ಲಿ ಏನೇನು ಮಾಡಬೇಕು ಎಂಬುದಕ್ಕೂ ಸಿದ್ಧತೆ ಆರಂಭಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಂದ ಸಲಹೆ ಆಹ್ವಾನಿಸಿದ್ದಾರೆ.

ಮೋದಿ ಅವರು ಮಾ.3ರಂದು ಸಂಪುಟ ದರ್ಜೆ ಹಾಗೂ ರಾಜ್ಯ ದರ್ಜೆ ಸಚಿವರನ್ನು ಒಳಗೊಂಡ ಇಡೀ ಮಂತ್ರಿಮಂಡಲದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅವರು ಎಲ್ಲ ಮಂತ್ರಿಗಳಿಗೆ ‘ಕ್ರಿಯಾತ್ಮಕ, ಸ್ಪಷ್ಟ ವ್ಯಾಖ್ಯಾನ ಇರುವ ಹಾಗೂ ಗಮನಾರ್ಹ’ ಎನ್ನಬಹುದಾದ ಕಾರ್ಯಸೂಚಿ ಸಿದ್ಧಪಡಿಸಿ ತಮ್ಮ ಮುಂದೆ ಮಂಡಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಫೆ.21ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೋದಿ ಅವರು ತಮ್ಮ ಸಚಿವ ಸಹೋದ್ಯೋಗಿಗಳಿಗೆ ಮುಂದಿನ 100 ದಿನಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಎಂದು ಹೇಳಿದ್ದರು. 

ಇದರ ಬೆನ್ನಲ್ಲೇ ಮತ್ತಷ್ಟು ವಿಸ್ತೃತ ಅಜೆಂಡಾ ಸಿದ್ಧಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ.ಯೋಜನೆ ಸಿದ್ಧಪಡಿಸುವ ಮುನ್ನ ಹಿರಿಯ ಅಧಿಕಾರಿಗಳು, ವಸ್ತುಸ್ಥಿತಿ ಅರಿವಿರುವ ತಜ್ಞರು ಮತ್ತು ಅನುಭವಿ ವ್ಯಕ್ತಿಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು. 

ಅವರ ಸಲಹೆ ಆಧರಿಸಿ ತಮ್ಮ ತಮ್ಮ ಸಚಿವಾಲಯಗಳ ಕಾರ್ಯಸೂಚಿ ರೂಪಿಸಬೇಕು ಎಂದು ಸಚಿವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ಘೋಷಣೆಯಾದರೂ ಸರ್ಕಾರದ ಕೆಲಸಗಳು ತಮ್ಮ 100 ದಿನಗಳ ಅಜೆಂಡಾದಂತೆ ಮುಂದುವರಿಯಬೇಕು. ಅಲ್ಲದೆ, ಈ ಅಜೆಂಡಾ ಮೂಲಕ ಪ್ರಣಾಳಿಕೆಯನ್ನೂ ಸಿದ್ಧಪಡಿಸಬಹುದು. 

ಜತೆಗೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇರುವ ಕಾರಣ ಚುನಾವಣಾ ನಂತರ ಇದೇ ಕಾರ್ಯಸೂಚಿಯಡಿ ಸರ್ಕಾರದ ಯೋಜನೆಗಳನ್ನು ರೂಪಿಸಬಹುದು ಎಂಬುದು ಮೋದಿ ಅವರ ಮನದಾಳದ ಇಂಗಿತವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇತ್ತೀಚೆಗೆ ಮೋದಿ ಮಾತನಾಡಿ, ಈಗಾಗಲೇ ತಮ್ಮ ಮೂರನೇ ಅವಧಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಪ್ರಾರಂಭಿಸಿದ್ದಾಗಿ ಮತ್ತು ಇದಕ್ಕಾಗಿ 15 ಲಕ್ಷಕ್ಕೂ ಹೆಚ್ಚು ಜನರಿಂದ ಸಲಹೆಗಳನ್ನು ಸ್ವೀಕರಿಸಿದ್ದಾಗಿ ಹೇಳಿದ್ದರು.