ಸಾರಾಂಶ
‘ಭಾರತ ಎಂದಿಗೂ ರೈತರ ಹಿತಾಸಕ್ತಿಯ ವಿಷಯದಲ್ಲಿ ರಾಜಿಯಾಗುವುದಿಲ್ಲ. ಅದಕ್ಕೆ ನಾನು ವೈಯಕ್ತಿಕವಾಗಿ ಬೆಲೆ ತೆರಲೂ ಸಿದ್ಧ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನವದೆಹಲಿ : ತಾನು ಬಯಸಿದಂತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಒತ್ತಡ ಹೇರುವ ಸಲುವಾಗಿಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ತೆರಿಗೆ ಹೇರಿದ್ದಾರೆ ಎಂಬ ವಿಶ್ಲೇಷಣೆಗಳ ನಡುವೆಯೇ, ‘ಭಾರತ ಎಂದಿಗೂ ರೈತರ ಹಿತಾಸಕ್ತಿಯ ವಿಷಯದಲ್ಲಿ ರಾಜಿಯಾಗುವುದಿಲ್ಲ. ಅದಕ್ಕೆ ನಾನು ವೈಯಕ್ತಿಕವಾಗಿ ಬೆಲೆ ತೆರಲೂ ಸಿದ್ಧ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ಮೂಲಕ ಆ.7ರಿಂದ ಜಾರಿಗೆ ಬರುವಂತೆ ಹೇರಲಾಗಿದ್ದ ಶೇ.25ರಷ್ಟು ಪ್ರತಿತೆರಿಗೆ ಹೇರಿ, ಬುಧವಾರವಷ್ಟೇ ಶೇ.25ರಷ್ಟು ದಂಡ ಹೇರಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿರುಗೇಟು ನೀಡಿದ್ದಾರೆ. ಇಂಥದ್ದೊಂದು ಹೇಳಿಕೆ ಮೂಲಕ ಟ್ರಂಪ್ ಜೊತೆಗಿನ ಸ್ನೇಹಕ್ಕಾಗಿ ರೈತರ ಹಿತ ಬಲಿಕೊಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರಿಗೆ ಮತ್ತು ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ವಿಪಕ್ಷಗಳಿಗೆ ಮೋದಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್. ಸ್ವಾಮಿನಾಥನ್ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ಜಾಗತಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಮಗೆ ನಮ್ಮ ರೈತರ ಹಿತ ಸರ್ವೋಚ್ಛ ಆದ್ಯತೆಯಾಗಿದೆ. ಭಾರತ ತನ್ನ ಕೃಷಿಕರು, ಪಶುಪಾಲಕರು ಹಾಗೂ ಮೀನುಗಾರ ಬಂಧುಗಳ ಹಿತಾಸಕ್ತಿಯೊಂದಿಗೆ ಎಂದೂ ರಾಜಿಯಾಗುವುದಿಲ್ಲ. ಇದಕ್ಕಾಗಿ ನಾನು ವೈಯಕ್ತಿಕವಾಗಿ ಬಹಳ ದೊಡ್ಡ ಬೆಲೆ ತೆರಬೇಕಾಗುವುದು ಎಂದು ನನಗೆ ತಿಳಿದಿದೆ. ಆದರೆ ನಾನದಕ್ಕೆ ಸಿದ್ಧ’ ಎಂದು ದೇಶದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಒತ್ತಡ ತಂತ್ರ:
ವ್ಯಾಪಾರ ಒಪ್ಪಂದದ ಭಾಗವಾಗಿ ಭಾರತ ತನ್ನ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ವಲಯವನ್ನು ಅಮೆರಿಕಕ್ಕೆ ತೆರೆಯಬೇಕು ಎಂಬುದು ಅಮೆರಿಕದ ಒತ್ತಡ. ಆದರೆ ಇದಕ್ಕೆ ಭಾರತ ಒಪ್ಪುತ್ತಿಲ್ಲ. ಹೀಗಾಗಿಯೇ ವ್ಯಾಪಾರ ಒಪ್ಪಂದ ಇನ್ನೂ ಕುದುರಿಲ್ಲ. ಹೀಗಾಗಿ ಭಾರತದ ಮೇಲೆ ಒತ್ತಡ ಹೇರಲೆಂದೇ ಇತರೆ ದೇಶಗಳಿಗಿಂತ ಟ್ರಂಪ್ ಭಾರತದ ಮೇಲೆ ಹೆಚ್ಚಿನ ತೆರಿಗೆ ಹೇರುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಕೃಷಿ ಕ್ಷೇತ್ರ ಅಭಿವೃದ್ಧಿಗೆ ಸಲಹೆ:
ದೇಶದ ಪೌಷ್ಟಿಕಾಂಶ ಸುರಕ್ಷತೆ, ಬೆಳೆ ವೈವಿಧ್ಯೀಕರಣ ಮತ್ತು ಎಲ್ಲಾ ಹವಾಮಾನಗಳಲ್ಲಿ ಬೆಳೆಯಬಲ್ಲ ಪ್ರಭೇದಗಳ ಅಭಿವೃದ್ಧಿ ಮತ್ತು ತಂತ್ರಜ್ಞಾನ ಏಕೀಕರಣವನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಜತೆಗೆ, ಬರಗಾಲದಲ್ಲೂ ಹುಲುಸಾಗಿ ಬೆಳೆಯಬಲ್ಲ, ಶಾಖ ತಡೆಯಬಲ್ಲ ಮತ್ತು ಪ್ರವಾಹವನ್ನೂ ಸಹಿಸಬಲ್ಲಂತಹ ಸಸಿಗಳ ಅಭಿವೃದ್ಧಿಗೆ ಕರೆ ನೀಡಿದ ಅವರು, ಕೇಷಿ ಕ್ಷೇತ್ರದಲ್ಲಿ ಎಐ ಬಳಕೆಯ ಮಹತ್ವವನ್ನೂ ತಿಳಿಸಿದರು.
‘ಒಂದೇ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದು, ಮಣ್ಣಿನ ಸೂಕ್ತತೆಯ ಕುರಿತು ಹೆಚ್ಚಿನ ಸಂಶೋಧನೆ, ಕೈಗೆಟುಕುವ ದರದಲ್ಲಿ ಮಣ್ಣಿನ ಪರೀಕ್ಷಾ ಸಾಧನಗಳ ಲಭ್ಯತೆ, ಪರಿಣಾಮಕಾರಿ ಪೋಷಕಾಂಶ ನಿರ್ವಹಣಾ ತಂತ್ರಗಳ ಅಭಿವೃದ್ಧಿ ಅಗತ್ಯ. ಸೌರಶಕ್ತಿ ಚಾಲಿತ ಸೂಕ್ಷ್ಮ ನೀರಾವರಿ, ಹನಿ ಮತ್ತು ನಿಖರ ನೀರಾವರಿಯನ್ನು ವ್ಯಾಪಕ ಮತ್ತು ಪರಿಣಾಮಕಾರಿಯಾಗಿ ಮಾಡಬೇಕು’ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಸರ್ಕಾರದ ಶ್ರಮವನ್ನು ವಿವರಿಸುತ್ತಾ, ‘ಸರ್ಕಾರ ಸದಾ ರಾಷ್ಟ್ರೀಯ ಪ್ರಗತಿಯನ್ನು ಬಲಪಡಿಸಲು ರೈತರ ಸಬಲೀಕರಣಕ್ಕೆ ಶ್ರಮಿಸಿದೆ. ಕೃಷಿ ಮತ್ತು ಸಂಬಂಧಿತ ವಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಪಿಎಂ ಕಿಸಾನ್ ಯೋಜನೆ, ಪಿಎಂ ಫಸಲ್ ಬಿಮಾ ಯೋಜನೆ, ಪಿಎಂ ಕೃಷಿ ಸಿಂಚಾಯಿ ಯೋಜನೆ, ಪಿಎಂ ಕಿಸಾನ್ ಸಂಪದ ಯೋಜನೆ, 10,000 ಎಫ್‌ಪಿಒ ರಚನೆ ಮತ್ತು ಇತ್ತೀಚಿನ ಪಿಎಂ ಧನ್ ಧಾನ್ಯ ಯೋಜನೆ ಜಾರಿಗೊಳಿಸಲಾಗಿದೆ. ಈ ಮೂಲಕ, ಕೃಷಿಕರ ಆದಾಯ ಹೆಚ್ಚಿಸುವುದರ ಜತೆಗೆ, ಉತ್ಪಾದನಾ ವೆಚ್ಚ ತಗ್ಗಿಸಿ, ಆದಾಯ ಗಳಿಕೆಗೆ ಅನ್ಯ ಮಾರ್ಗಗಳನ್ನೂ ತೆರೆಯಲಾಗಿದೆ’ ಎಂದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))