ಸಾರಾಂಶ
ಮುಸ್ಲಿಂ ಬಾಹುಳ್ಯದ ಲಕ್ಷದ್ವೀಪದಲ್ಲಿ ಮುಸ್ಲಿಂ ಮತದಾರರ ಮನಗೆಲ್ಲಲು ಪ್ರಧಾನಿ ಮೋದಿ ಯತ್ನ ನಡೆಸಿದ್ದು, ಲಕ್ಷದ್ವೀಪದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು
ಕವರಟ್ಟಿ: ಲಕ್ಷದ್ವೀಪವು ಗಾತ್ರದಲ್ಲಿ ಚಿಕ್ಕದಾದರೂ ಇಲ್ಲಿನ ಜನರ ಹೃದಯ ಬಹಳ ದೊಡ್ಡದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಈ ಮೂಲಕ ಮುಸ್ಲಿಂ ಬಾಹುಳ್ಯದ ಲಕ್ಷದ್ವೀಪದಲ್ಲಿ ಮುಸ್ಲಿಂ ಮತದಾರರ ಮನಗೆಲ್ಲಲು ಯತ್ನ ನಡೆಸಿದ್ದಾರೆ.
ಕವರಟ್ಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ‘ನನ್ನನ್ನು ಇಲ್ಲಿಗೆ ಬರಮಾಡಿಕೊಂಡ ರೀತಿಯಿಂದ ನಾನು ಬಹಳ ಮಂದಸ್ಮಿತನಾಗಿದ್ದೇನೆ. ಲಕ್ಷದ್ವೀಪ ಗಾತ್ರದಲ್ಲಿ ಚಿಕ್ಕದಾದರೂ ಇಲ್ಲಿನ ಜನರ ಪ್ರೀತಿ ಮತ್ತು ಆಶೀರ್ವಾದ ತೋರುವ ಗುಣ ಬಹಳ ದೊಡ್ಡದು. ಇದಕ್ಕೆ ನಾನು ನಿಮಗೆ ಕೃತಜ್ಞತೆ ಅರ್ಪಿಸುತ್ತೇನೆ’ ಎಂದು ತಿಳಿಸಿದರು. ಲಕ್ಷದ್ವೀಪದಲ್ಲಿ ಮುಸ್ಲಿಮರೇ ಹೆಚ್ಚು ಎಂಬುದು ಇಲ್ಲಿ ಗಮನಾರ್ಹ.ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘ಹಿಂದಿನ (ಕಾಂಗ್ರೆಸ್) ಸರ್ಕಾರಗಳು ದೂರದ ರಾಜ್ಯಗಳು ಮತ್ತು ಸಮುದ್ರದೊಳಗಿನ ಪ್ರದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ತಮ್ಮ ಪಕ್ಷಗಳನ್ನು ಅಭಿವೃದ್ಧಿ ಪಡಿಸಿಕೊಂಡವು. ಆದರೆ ನಾನು ನಿಮಗೆ 2020ರಲ್ಲಿ ಮುಂದಿನ 1000 ದಿನಗಳ ಒಳಗೆ ಅತ್ಯಂತ ವೇಗಯುತ ಇಂಟರ್‌ನೆಟ್ ಸೌಲಭ್ಯ ಕೊಡುವುದಾಗಿ ವಾಗ್ದಾನ ಕೊಟ್ಟಿದ್ದೆ. ಅದನ್ನು ಸಬ್‌ಮೆರಿನ್ ಆಪ್ಟಿಕ್ ಫೈಬರ್ ಪ್ರಾಜೆಕ್ಟ್ ಮೂಲಕ ಇಂದು ಉದ್ಘಾಟಿಸಿದ್ದೇನೆ. ಇನ್ನು ಮುಂದೆ ಲಕ್ಷದ್ವೀಪದಲ್ಲಿ ನೂರು ಪಟ್ಟು ವೇಗದಲ್ಲಿ ದೂರಸಂಪರ್ಕ ಮತ್ತು ಅಂತರ್ಜಾಲ ಸೇವೆಗಳು ದೊರಕಲಿವೆ’ ಎಂದರು.