ಮೋದಿ ಕರೆಸುವಂತೆ ಬಿಎನ್‌ಪಿಯಲ್ಲೇ ಒತ್ತಡ: ಮೂಲಗಳು

16 ಅಥವಾ 17ಕ್ಕೆ ಬಾಂಗ್ಲಾ ಪ್ರಧಾನಿ ಆಗಿ ಶಪಥ ಸಾಧ್ಯತೆ

ಢಾಕಾ: ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಪಕ್ಷ ಅಭೂತಪೂರ್ವ ಜಯ ಸಾಧಿಸಿದ ಬೆನ್ನಲ್ಲೇ, ಫೆ.16 ಅಥವಾ 17ರಂದು ನೂತನ ಪ್ರಧಾನಿಯಾಗಿ ತಾರೀಖ್‌ ರೆಹಮಾನ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ಬರುವ ಸಾಧ್ಯತೆಯಿದೆ. ಮೋದಿ ಅವರನ್ನು ಆಹ್ವಾನಿಸುವಂತೆ ತಾರೀಖ್‌ ಅವರ ಪಕ್ಷ ಬಿಎನ್‌ಪಿಯಲ್ಲಿ ಒತ್ತಡವಿದೆ ಎಂದು ಗೊತ್ತಾಗಿದೆ.

ಮೋದಿ ಸೇರಿ ಏಷ್ಯಾದ ನಾಯಕರನ್ನು ಅಹ್ವಾನಿಸುವ ವಿಶ್ವಾಸವಿದೆ ಎಂದು ಬಿಎನ್‌ಪಿ ನಾಯಕ ಎಹ್ಸಾನ್‌ ಉಲ್‌ ಹಕ್‌ ಹೇಳಿದ್ದಾರೆ.‘ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಶೀಘ್ರದಲ್ಲೇ, ಅಂದರೆ ಸೋಮವಾರ ಅಥವಾ ಮಂಗಳವಾರ ನಡೆಯಲಿದೆ’ ಎಂದು ಬಾಂಗ್ಲಾ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಹೇಳಿದ್ದಾರೆ. ಸಮಾರಂಭಕ್ಕೆ ಪ್ರಾದೇಶಿಕ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಲು ಸಿದ್ಧತೆಗಳು ನಡೆಯುತ್ತಿದ್ದು, ಪ್ರಧಾನಿ ಮೋದಿ ಪ್ರಮುಖ ಆಹ್ವಾನಿತರಲ್ಲಿ ಒಬ್ಬರಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.


==

ಹಿಂಸೆ ಬೇಡ, ಒಗ್ಗಟ್ಟಾಗಿರೋಣ, ದೇಶ ಹಿತಕ್ಕೆ ನನ್ನ ಆದ್ಯತೆ: ತಾರೀಖ್‌

ಪಿಟಿಐ ಢಾಕಾ‘ಬಾಂಗ್ಲಾದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯಲು ಯಾವುದೇ ಬೆಲೆ ತೆತ್ತಾದರೂ ಆದ್ಯತೆ ನೀಡುವೆ. ವಿದೇಶಾಂಗ ವ್ಯವಹಾರಗಳಲ್ಲಿ ದೇಶ ಹಿತವೇ ನನ್ನ ಮೊದಲ ಆದ್ಯತೆ’ ಬಾಂಗ್ಲಾದೇಶದ ಬಿಎನ್‌ಪಿ ಅಧ್ಯಕ್ಷ ಹಾಗೂ ಭಾವಿ ಪ್ರಧಾನಿ ತಾರೀಖ್‌ ರೆಹಮಾನ್ ಶನಿವಾರ ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಬಾಂಗ್ಲಾದೇಶದ ಹೊಸ ಅಧ್ಯಾಯ ಆರಂಭವಾಗಿದೆ. ನಮ್ಮ ಮಾರ್ಗಗಳು ಮತ್ತು ಅಭಿಪ್ರಾಯಗಳು ಭಿನ್ನವಾಗಿರಬಹುದು ಆದರೆ ದೇಶದ ಹಿತದೃಷ್ಟಿಯಿಂದ ನಾವು ಒಗ್ಗಟ್ಟಿನಿಂದ ಇರಬೇಕು. ರಾಷ್ಟ್ರೀಯ ಏಕತೆ ನಮ್ಮ ಸಾಮೂಹಿಕ ಶಕ್ತಿ ಮತ್ತು ವಿಭಜನೆ ನಮ್ಮ ದೌರ್ಬಲ್ಯ ಎಂದು ನಾನು ದೃಢವಾಗಿ ನಂಬುತ್ತೇನೆ’ ಎಂದರು.ಭಾರತ, ಪಾಕ್‌, ಚೀನಾ ವಿಷಯದಲ್ಲಿನ ನಿಮ್ಮ ನಿಲುವು ಏನು ಎಂಬ ಪ್ರಶ್ನೆಗೆ, ‘ದೇಶದ ಹಿತ ನನ್ನ ಮೊದಲ ಆಧ್ಯತೆ. ಅದಕ್ಕೆ ಅನುಗುಣವಾಗಿ ನಡೆಯುವೆ’ ಎಂದರು.