ಸಾರಾಂಶ
ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧಿಸುವುದು ಗುಲಾಮಗಿರಿ ಮನಸ್ಥಿತಿ ಇದಕ್ಕೆ ವಿದೇಶಗಳಿಂದ ಕುಮ್ಮಕ್ಕು ಸಿಗುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ ಮಹಾಕುಂಭಮೇಳವು ‘ಏಕತೆಯ ಮಹಾಕುಂಭ’ ಆಗಿದ್ದು, ಟೀಕಾಕಾರರಿಗೆ ಇದೇ ಉತ್ತರ’ ಎಂದು ಬಣ್ಣಿಸಿದ್ದಾರೆ.
ಛತ್ತರ್‌ಪುರ (ಮ.ಪ್ರ.) : ದೇಶದ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧಿಸುವುದು ಗುಲಾಮಗಿರಿ ಮನಸ್ಥಿತಿಯಾಗಿದ್ದು ಇದಕ್ಕೆ ವಿದೇಶಗಳಿಂದ ಕುಮ್ಮಕ್ಕು ಸಿಗುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಯಾಗ್‌ರಾಜ್‌ನ ಮಹಾಕುಂಭಮೇಳವು ‘ಏಕತೆಯ ಮಹಾಕುಂಭ’ ಆಗಿದ್ದು, ಟೀಕಾಕಾರರಿಗೆ ಇದೇ ಉತ್ತರ’ ಎಂದು ಬಣ್ಣಿಸಿದ್ದಾರೆ.
ಇತ್ತೀಚೆಗೆ ಕುಂಭಮೇಳದ ಬಗ್ಗೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್ ಹಾಗೂ ಅಖಲೇಶ್ ಯಾದವ್ ಕೆಲವು ಟೀಕೆಗಳನ್ನು ಮಾಡಿದ್ದರು. ‘ಮೃತ್ಯುಕುಂಭ’, ’ಕುಂಭಮೇಳ ಎಂಬುದು ಓಳು’ ಎಂದಿದ್ದರು. ಅದರ ಬೆನ್ನಲ್ಲೇ ಮೋದಿ ಈ ತಿರುಗೇಟು ನೀಡಿದ್ದಾರೆ
ಭಾನುವಾರ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಬಾಗೇಶ್ವರ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಪ್ರಧಾನಿ, ‘ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಪಹಾಸ್ಯ ಮಾಡುವ, ಜನರನ್ನು ವಿಭಾಗಿಸುವಲ್ಲಿ ತೊಡಗಿಕೊಂಡಿರುವ ವರ್ಗವಿದೆ. ಹಲವು ಬಾರಿ ವಿದೇಶಿ ಶಕ್ತಿಗಳು ಸಹ ಈ ಜನರನ್ನು ಬೆಂಬಲಿಸುವ ಮೂಲಕ ದೇಶ ಮತ್ತು ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಇದು ಗುಲಾಮಗಿರಿ ಮನಸ್ಥಿತಿ’ ಎಂದರು.
ಆದರೆ ಇದೇ ವೇಳೆ, ಮಹಾಕುಂಭಮೇಳದಲ್ಲಿ ಶ್ರಮಿಸಿದ ನೈರ್ಮಲ್ಯ ಕಾರ್ಮಿಕರು ಮತ್ತು ಪೊಲೀಸರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತ ಪಡಿಸಿದ ಮೋದಿ, ‘ಈ ಏಕತೆಯ ಮಹಾಕುಂಭದಲ್ಲಿ ಸಾವಿರಾರು ವೈದ್ಯರು ಮತ್ತು ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ಸಮರ್ಪಣಾಭಾವ ಮತ್ತು ಸೇವಾ ಮನೋಭಾವನೆಯಿಂದ ತೊಡಗಿಸಿಕೊಂಡಿದ್ದಾರೆ. ಏಕತೆಯ ಮಹಾಕುಂಭಮೇಳಕ್ಕೆ ಹೋದ ಜನರು ಇದನ್ನು ಶ್ಲಾಘಿಸುತ್ತಿದ್ದಾರೆ’ ಎಂದರು.
ಸಿಗರೇಟು, ಬೀಡಿ ಬಿಡಿ:
ಕಾರ್ಯಕ್ರಮದಲ್ಲಿ ಮೋದಿ, ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಉಲ್ಲೇಖಿಸಿ ಮಾತನಾಡಿ, ಈ ವರ್ಷದ ಬಜೆಟ್‌ನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಲು ಹಲವು ಘೋಷಣೆಗಳನ್ನು ಮಾಡಲಾಗಿದೆ. ಕ್ಯಾನ್ಸರ್ ಔಷಧಿಗಳನ್ನು ಅಗ್ಗವಾಗಿಸಲು ನಿರ್ಧರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಡೇಕೇರ್ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ಅಲ್ಲದೆ, ಕ್ಯಾನ್ಸರ್ ಕಾರಕ ಸಿಗರೇಟು, ಬೀಡಿ ಹಾಗೂ ತಂಬಾಕು ಸೇವನೆಯನ್ನು ಜನರು ಬಿಡಬೇಕು ಎಂದು ಕರೆ ನೀಡಿದರು.