ಸಾರಾಂಶ
ಪಾಣಿಪತ್ : ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹರ್ಯಾಣದ ಪಾಣಿಪತ್‌ನಲ್ಲಿ ‘ಬಿಮಾ ಸಖಿ ಯೋಜನೆ’ಗೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಿಂದ ಮುಂದಿನ 3 ವರ್ಷದಲ್ಲಿ 2 ಲಕ್ಷ ಮಹಿಳಾ ಎಲ್‌ಐಸಿ ಏಜೆಂಟ್‌ಗಳ ನೇಮಕ ಮಾಡುವ ಉದ್ದೇಶವನ್ನು ಹೊಂದಿದೆ.
ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಮಹಿಳಾ ಸಬಲೀಕರಣ ಉದ್ದೇಶದಿಂದ ಆರಂಭಿಸಿದೆ. ಕನಿಷ್ಠ 10ನೇ ಕ್ಲಾಸ್ ಪಾಸಾದ 18ರಿಂದ 70 ವರ್ಷದವರೆಗಿನ ಮಹಿಳೆಯರಿಗೆ ಏಜೆಂಟ್‌ರಾಗುವ ಅವಕಾಶ ಕಲ್ಪಿಸಲಿದೆ . ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಮತ್ತು ವಿಮಾ ಜಾಗೃತೆಯನ್ನುಉತ್ತೇಜಿಸಲು ಮೊದಲ 3 ವರ್ಷದಲ್ಲಿ ಅವರಿಗೆ ತರಬೇತಿ ನೀಡಲಾಗುತ್ತದೆ.
ಏನಿದು ‘ಬಿಮಾ ಸಖಿ’ ಯೋಜನೆ?:
ಈ ಯೋಜನೆಯಡಿ, ತರಬೇತಿ ಪಡೆವ ಮಹಿಳೆಯರಿಗೆ ಸ್ಟೈಪೆಂಡ್ ಕೂಡ ಕೇಂದ್ರ ಸರ್ಕಾರವೇ ನೀಡಲಿದೆ. ಮೊದಲ ವರ್ಷ 7 ಸಾವಿರ ರು., ಎರಡನೇ ವರ್ಷ 6 ಸಾವಿರ ರು. , ಮೂರನೇ ವರ್ಷ 5 ಸಾವಿರ ರು.ಸ್ಟೈಪೆಂಡ್ ಲಭಿಸಲಿದೆ. ಈ ಮೂಲಕ ಮುಂದಿನ 3 ವರ್ಷಗಳಲ್ಲಿ ಈ ಯೋಜನೆಯಡಿ 2 ಲಕ್ಷ ಮಹಿಳಾ ಏಜೆಂಟ್‌ಗಳನ್ನು ನೇಮಕ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇನ್ನು 12 ತಿಂಗಳಲ್ಲಿ 1 ಲಕ್ಷ ಏಜೆಂಟರು ನೇಮಕವಾಗಲಿದ್ದಾರೆ.ಸರ್ಕಾರದಿಂದ 3 ವರ್ಷಗಳ ತರಬೇತಿಯನ್ನು ಪಡೆದ ಬಳಿಕ ಅವರು ಕಾಯಂ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಬಹುದು. ಪದವಿ ಪಡೆದ ಬಿಮಾ ಸಖಿಗಳು ಎಲ್ಐಸಿಯಲ್ಲಿ ಡೆವಲಪ್ಮೆಂಟ್ ಆಫೀಸರ್‌ಗಳಾಗಿ ಕೂಡ ಕೆಲಸವನ್ನು ನಿರ್ವಹಿಸಬಹುದು. ಬಿಮಾ ಸಖಿಗಳಿಗೂ ಕಮಿಷನ್ ಲಾಭ ಸಿಗಲಿದೆ. ನಿರೀಕ್ಷಿತ ಬಿಮಾ ಸಖಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಪ್ರಮಾಣ ಪತ್ರಗಳನ್ನು ಕೂಡ ವಿತರಿಸಲಿದ್ದಾರೆ.