ಬಾಂಬ್‌ ಬದಲು ಪಾಕ್‌ ಈಗ ಭಿಕ್ಷಾಪಾತ್ರೆ ಹಿಡಿದಿದೆ: ಮೋದಿ

| Published : May 19 2024, 01:45 AM IST / Updated: May 19 2024, 06:18 AM IST

ಬಾಂಬ್‌ ಬದಲು ಪಾಕ್‌ ಈಗ ಭಿಕ್ಷಾಪಾತ್ರೆ ಹಿಡಿದಿದೆ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನ ಈ ಮೊದಲು ತನ್ನ ಕೈಯಲ್ಲಿ ಬಾಂಬ್‌ಗಳನ್ನು ಇಟ್ಟುಕೊಂಡಿತ್ತು. ಈಗ ಭಿಕ್ಷಾ ಪಾತ್ರೆಯನ್ನು ಹಿಡಿದು ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂದಲಿಸಿದ್ದಾರೆ.

 ಅಂಬಾಲ :  ಪಾಕಿಸ್ತಾನ ಈ ಮೊದಲು ತನ್ನ ಕೈಯಲ್ಲಿ ಬಾಂಬ್‌ಗಳನ್ನು ಇಟ್ಟುಕೊಂಡಿತ್ತು. ಈಗ ಭಿಕ್ಷಾ ಪಾತ್ರೆಯನ್ನು ಹಿಡಿದು ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂದಲಿಸಿದ್ದಾರೆ.

ಅಲ್ಲದೆ, ದೇಶದಲ್ಲಿ ಬಲಿಷ್ಠ ಸರ್ಕಾರವಿದ್ದರೆ, ಏನಾದರೂ ಮಾಡುವ ಬಗ್ಗೆ ಶತ್ರು ಕೂಡ 100 ಬಾರಿ ಯೋಚಿಸುತ್ತಾನೆ. ಭಯಭೀತನಾಗುತ್ತಾನೆ. ಇಂತಹ ಬಲಿಷ್ಠ ಸರ್ಕಾರದಿಂದಾಗಿಯೇ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದಾಗಿದೆ. ಪಾಕಿಸ್ತಾನ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.

ಮೇ 25ರಂದು ಲೋಕಸಭೆ ಚುನಾವಣೆ ನಡೆಯಲಿರುವ ಹರ್ಯಾಣದಲ್ಲಿ ಬಿಜೆಪಿ ರ್‍ಯಾಲಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ದೇಶದ ಸಶಸ್ತ್ರ ಪಡೆಗಳಿಗೆ ಗಮನಾರ್ಹ ಪ್ರಮಾಣದಲ್ಲಿ ಹರ್ಯಾಣ ಯೋಧರನ್ನು ಕೊಡುತ್ತದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ತಮ್ಮ ಮಕ್ಕಳ ಬಗ್ಗೆ ಹರ್ಯಾಣದ ತಾಯಂದಿರು ಚಿಂತಿತರಾಗಿದ್ದರು. ಈಗ ಅಂತಹದ್ದೆಲ್ಲಾ ನಿಂತಿದೆ ತಾನೇ ಎಂದು ಪ್ರಧಾನಿ ಕೇಳಿದರು. ಅದಕ್ಕೆ ಸಭಿಕರು ಹೌದು ಎಂದು ಕೂಗಿದರು.

ಸೇನಾ ಪಡೆಗಳು ಹಾಗೂ ಯೋಧರಿಗೆ ವಂಚನೆ ಮಾಡುವ ಇತಿಹಾಸವನ್ನು ಕಾಂಗ್ರೆಸ್‌ ಹೊಂದಿದೆ ಎಂದು ಹೇಳಿದ ಅವರು, ಕಾಂಗ್ರೆಸ್‌ ಸರ್ಕಾರದ ‘ಜೀಪ್‌ ಹಗರಣ’ವನ್ನು ಪ್ರಸ್ತಾಪಿಸಿದರು.

==

370ನೇ ವಿಧಿ ಸ್ಮಶಾನದಲ್ಲಿ ಹೂತಿದ್ದೇವೆ, ಅದರ

ಮರುಜಾರಿ ಕನಸನ್ನು ಕಾಂಗ್ರೆಸ್‌ ಬಿಡಲಿ: ಮೋದಿ

370ನೇ ವಿಧಿ ಮರುಜಾರಿ ಉಗ್ರರಿಗೆ ಅನುಕೂಲ: ಪ್ರಧಾನಿಸೋನಿಪತ್‌ (ಹರ್ಯಾಣ): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ನಾವು ಸ್ಮಶಾನದಲ್ಲಿ ಹೂತು ಹಾಕಿದ್ದೇವೆ. ಅದರ ಮರುಜಾರಿಯ ಕನಸನ್ನು ಕಾಂಗ್ರೆಸ್‌ ಮರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಸಲಹೆ ನೀಡಿದ್ದಾರೆ.

ಇಲ್ಲಿನ ಗೋಹಾನಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ‘ಕಾಂಗ್ರೆಸ್‌ ಈಗ ತನ್ನ ದೇಶ ವಿರೋಧಿ ನೀತಿಯನ್ನು ಚುನಾವಣೆಗೆ ನೇರವಾಗಿ ಬಳಸುತ್ತಿದೆ. ಈ ಚುನಾವಣೆ ಒಂದು ಕೈಯಲ್ಲಿ ಅಭಿವೃದ್ಧಿ ಹಾಗೂ ಮತ್ತೊಂದು ಕೈಯಲ್ಲಿ ‘ವೋಟ್‌ ಜಿಹಾದ್‌’ ನಡುವಿನದ್ದಾಗಿದೆ. ಕಾಂಗ್ರೆಸ್‌ಗೆ 10 ವರ್ಷ ಅಧಿಕಾರ ಇಲ್ಲದಿರುವುದು ಕೈ ಕಟ್ಟಿಹಾಕಿದಂತಾಗಿದೆ. 

ಇವರಿಗೆ ಒಂದು ವೇಳೆ ಅಧಿಕಾರ ಕೊಟ್ಟರೆ ದೇಶವನ್ನು ಅರಾಜಕತೆಗೆ ಕೊಂಡೊಯ್ಯುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪನೆ ಮಾಡಿ, ಉಗ್ರರಿಗೆ ತಮ್ಮ ಚಟುವಟಿಕೆ ಮಾಡಿಕೊಳ್ಳಲು ಎಲ್ಲ ಅನುಕೂಲ ಮಾಡಿಕೊಡುತ್ತಾರೆ’ ಎಂದು ಪ್ರಹಾರ ನಡೆಸಿದರು.ಜೊತೆಗೆ ಇವರ ಕೂಟದ ಹೆಸರನ್ನು ‘ಇಂಡಿಯಾ’ ಎಂದು ಬದಲಾಯಿಸಿಕೊಂಡ ಮಾತ್ರಕ್ಕೆ ಇವರ ಹಣೆ ಬರಹ ಬದಲಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.