ಸಾರಾಂಶ
ಪಿಟಿಐ ನವದೆಹಲಿ
ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯ ದಿನ ನಾವು ಕಂಡದ್ದು ಮುಂದಿನ ವರ್ಷಗಳಲ್ಲಿ ನಮ್ಮ ನೆನಪಿನಲ್ಲಿ ಸದಾ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಪ್ರಾಣಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ವಿಡಿಯೋ ಮಾಂಟೇಜ್ ಷೇರ್ ಮಾಡಿ ಟ್ವೀಟ್ ಮಾಡಿರುವ ಮೋದಿ, ‘ಜನವರಿ 22 ರಂದು ನಾವು ಅಯೋಧ್ಯೆಯಲ್ಲಿ ನೋಡಿದ್ದು ಮುಂದಿನ ವರ್ಷಗಳಲ್ಲೂ ನಮ್ಮ ನೆನಪಿನಲ್ಲಿ ಉಳಿಯುತ್ತದೆ’ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ, ಪ್ರಾಣಪ್ರತಿಷ್ಠಾಪನೆಯಲ್ಲಿ ಮೋದಿ ಭಾಗಿಯಾದ ದೃಶ್ಯಗಳು, ಸಮಾರಂಭದಲ್ಲಿ ನರೆದಿದ್ದ ಗಣ್ಯರ ಉತ್ಸಾಹ, ಕೆಲವರು ಆನಂದಬಾಷ್ಪ ಸುರಿಸಿದ್ದು- ಈ ರೀತಿಯ ಎಲ್ಲ ದೃಶ್ಯಗಳಿವೆ.
ಸೋಮವಾರ ಪ್ರಾಣಪ್ರತಿಷ್ಠಾಪನೆ ಮಾಡಿದ್ದ ಮೋದಿ, ‘ಇದು ಹೊಸ ಯುಗದ ಆರಂಭವಾಗಿದೆ’ ಎಂದಿದ್ದರು.
ರಾಜಸ್ಥಾನ ಶಿಲ್ಪಿ ಕೆತ್ತಿದ್ದ ಬಿಳಿಯ ರಾಮಲಲ್ಲಾ ಫೋಟೋ ಲೀಕ್
ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವುದಕ್ಕಾಗಿ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಕೆತ್ತಿದ್ದ ಬಿಳಿಯ ಶಿಲೆ ರಾಮಲಲ್ಲಾ ಮೂರ್ತಿಯ ಫೋಟೋ ಸೋರಿಕೆಯಾಗಿದೆ.
ಬಿಳಿಯ ಶಿಲೆಯಲ್ಲಿ ಕೆತ್ತಲಾಗಿರುವ ಬಾಲಕ ರಾಮ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣಗಳನ್ನು ಹಿಡಿದುಕೊಂಡಿದ್ದು, ರಾಮ ಮೂರ್ತಿಯ ಸುತ್ತಲೂ ಇರುವ ಕಮಾನಿನಲ್ಲಿ ವಿಷ್ಣುವಿನ ದಶಾವತಾರಗಳನ್ನು ಕೆತ್ತಲಾಗಿದೆ.
ಮೇಲ್ಭಾಗದಲ್ಲಿ ಸೂರ್ಯ, ಗದೆ ಮತ್ತು ಕಮಲಗಳನ್ನು ಕೆತ್ತಲಾಗಿದೆ. ಇದರಲ್ಲೂ ಸಹ ಬಾಲರಾಮ ಕಮಲದ ಮೇಲೆ ನಿಂತಿದ್ದು, ಎರಡು ಬದಿಗಳಲ್ಲಿ ಆಂಜನೇಯ ಮತ್ತು ಗರುಡನ ವಿಗ್ರಹಗಳನ್ನು ಕೆತ್ತಲಾಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪುಶಿಲೆಯಲ್ಲಿ ಕೆತ್ತಿರುವ ಕಪ್ಪುಶಿಲೆಯ ವಿಗ್ರಹವನ್ನು ರಾಮಮಂದಿರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.ಮೂರನೇ ವಿಗ್ರಹವನ್ನು ಕನ್ನಡಿಗರೇ ಆದ ಇಡಗುಂಜಿಯ ಗಣೇಶ್ ಭಟ್ ಕೆತ್ತಿದ್ದಾರೆ. ಅದರ ಫೋಟೋ ಇನ್ನೂ ಬಿಡುಗಡೆಯಾಗಿಲ್ಲ.