ಸಾರಾಂಶ
ಶಬರಿಮಲೆ, ಇತರ ದೇಗುಲಗಳ ವಿಷಯ ಪ್ರಸ್ತಾಪಿಸಿ ಪ್ರಧಾನಿ ಮೋದಿ ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ತ್ರಿಶ್ಶೂರ್ ಮಹಿಳಾ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.
ತ್ರಿಶ್ಶೂರ್: ’ವಿಪಕ್ಷಗಳ ಇಂಡಿಯಾ ಒಕ್ಕೂಟ ಜನರ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದೆ. ಅವರು ನಮ್ಮ ದೇವಸ್ಥಾನಗಳು ಮತ್ತು ಹಬ್ಬಗಳನ್ನು ಲೂಟಿಗಾಗಿ ಬಳಕೆ ಮಾಡಿಕೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ವಿರುದ್ಧ ಕಿಡಿಕಾರಿದ್ದಾರೆ.
ತ್ರೀಶ್ಶೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷಗಳು ಮತ್ತು ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇಂಡಿಯಾ ಒಕ್ಕೂಟಕ್ಕೆ ಗೊತ್ತಿರುವುದು ಒಂದೇ ಒಂದು ಸಂಗತಿ ಮಾತ್ರ. ನಮ್ಮ ಧಾರ್ಮಿಕ ನಂಬಿಕೆಗಳನ್ನು ನಿರಂತರವಾಗಿ ಹಾನಿ ಮಾಡುವುದು. ಅವರು ನಮ್ಮ ದೇವಸ್ಥಾನಗಳು ಮತ್ತು ಹಬ್ಬಗಳನ್ನು ಲೂಟಿಗಾಗಿ ಬಳಸಿಕೊಂಡಿದ್ದಾರೆ. ‘ತ್ರಿಶ್ಶೂರ್ ಪೂರಂ’ ನಡೆದ ರಾಜಕೀಯ ದುರದೃಷ್ಟಕರ. ಶಬರಿಮಲೆಯಲ್ಲಿನ ಅವ್ಯವಸ್ಥೆಯಿಂದಾಗಿ ಭಕ್ತರು ಕಷ್ಟಪಡುವಂತಾಯಿತು. ಇದು ಇಲ್ಲಿನ ರಾಜ್ಯ ಸರ್ಕಾರ ನ್ಯೂನತೆಗೆ ಸಾಕ್ಷಿಯಾಗಿದೆ’ ಎಂದು ಅವರು ಹೇಳಿದರು. ಕೇಂದ್ರದಿಂದ ಮಹಿಳಾ ಸಬಲೀಕರಣ:ಇದೇ ವೇಳೆ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ದೊರಕಿದ ವಿಷಯವನ್ನು ಪ್ರಸ್ತಾಪಿಸಿದ ಅವರು, ನಾರಿಶಕ್ತಿ ಅಧಿನಿಯಮ ಇದೀಗ ಕಾಯ್ದೆಯಾಗಿದೆ. ಈ ಮೂಲಕ ಮಹಿಳೆಯರ ಸಭಲೀಕರಣಕ್ಕೆ ನಾವು ನೆರವಾಗಿದ್ದೇವೆ ಎಂದು ಹೇಳಿದರು. ವಿಷಾದ ಏನೆಂದರೆ ಸ್ವಾತಂತ್ರ್ಯದ ನಂತರ ಎಡಪಂಥೀಯ ಕಾಂಗ್ರೆಸ್ ಸರ್ಕಾರ ನಮ್ಮ ಮಹಿಳೆಯರ ಶಕ್ತಿಯನ್ನು ದುರ್ಬಲಗೊಳಿಸಿತು. ಕಾಂಗ್ರೆಸ್ ಹಾಗೂ ವಿಪಕ್ಷಗಳು ಲೋಕಸಭೆಯಲ್ಲಿ ಮೀಸಲಾತಿ ಮಸೂದೆಯನ್ನು ವಿಳಂಬಗೊಳಿಸಿದವು ಎಂದು ಆಕ್ರೋಶ ವ್ಯಕ್ತಪಡಿಸಿದರು.