ಸಾರಾಂಶ
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ, ಭವ್ಯ ರಾಮಮಂದಿರದಲ್ಲಿ ಸೋಮವಾರ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಗುಲದ ಹೊರಭಾಗದಲ್ಲಿ ನೆರೆದಿದ್ದ ಸಹಸ್ರಾರು ಗಣ್ಯರನ್ನು ಉದ್ದೇಶಿಸಿ 36 ನಿಮಿಷ ಪ್ರಧಾನಿ ಮಾತನಾಡಿದರು.
ಪಿಟಿಐ ಅಯೋಧ್ಯೆ
‘ಸುದೀರ್ಘ ಕಾಯುವಿಕೆಯ ಬಳಿಕ ಕಡೆಗೂ ರಾಮನ ಆಗಮನವಾಗಿದೆ. ಬಾಲರಾಮ ಇನ್ನು ಟೆಂಟ್‌ನಲ್ಲಿ ಇರಬೇಕಿಲ್ಲ. ಭವ್ಯವಾದ ದೇಗುಲದಲ್ಲಿ ನೆಲೆಸಲಿದ್ದಾನೆ.
ಕ್ಯಾಲೆಂಡರ್‌ನಲ್ಲಿ ಈ ದಿನ ಒಂದು ದಿನಾಂಕವಷ್ಟೇ ಅಲ್ಲ. ಹೊಸ ಕಾಲಚಕ್ರದ ಉದಯ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಹೊಸ ಯುಗ ಆರಂಭವಾಗಿದೆ. ಇನ್ನೇನಿದ್ದರೂ ಮುಂದಿನ 1000 ವರ್ಷಗಳ ಬಲಿಷ್ಠ, ಭವ್ಯ, ದಿವ್ಯ ಭಾರತ ಕಟ್ಟಲು ಜನತೆ ಅಡಿಪಾಯ ಹಾಕಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವಾಸಿಗಳಿಗೆ ಕರೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ, ಭವ್ಯ ರಾಮಮಂದಿರದಲ್ಲಿ ಸೋಮವಾರ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಗುಲದ ಹೊರಭಾಗದಲ್ಲಿ ನೆರೆದಿದ್ದ ಸಹಸ್ರಾರು ಗಣ್ಯರನ್ನು ಉದ್ದೇಶಿಸಿ 36 ನಿಮಿಷ ಪ್ರಧಾನಿ ಮಾತನಾಡಿದರು.
ಇದು ವಿಜಯೋತ್ಸವ ಮಾತ್ರವೇ ಅಲ್ಲ. ವಿನಮ್ರತೆ. ಸಂಪದ್ಭರಿತ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಆರಂಭಕ್ಕೆ ರಾಮ ದೇಗುಲ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಈ ದಿನ ಹಾಗೂ ಕ್ಷಣವನ್ನು ಜನರು ಸಹಸ್ರಾರು ವರ್ಷಗಳಾಚೆಗೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಶ್ರೀರಾಮನ ಆಶೀರ್ವಾದದಿಂದಾಗಿ ನಾವು ಈ ಗಳಿಗೆಗೆ ಸಾಕ್ಷಿಯಾಗಿದ್ದೇವೆ.
ಬಹಳ ಹಿಂದೆಯೇ ದೇಗುಲ ನಿರ್ಮಾಣವನ್ನು ನಾವು ಮಾಡಲಿಲ್ಲ. ಇದಕ್ಕಾಗಿ ರಾಮನಲ್ಲಿ ಕ್ಷಮೆ ಯಾಚಿಸುತ್ತೇನೆ. ಶ್ರೀರಾಮ ನಮ್ಮನ್ನು ಕ್ಷಮಿಸುತ್ತಾನೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ರಾಮ ಎಂದರೆ ಭಾರತದ ನಂಬಿಕೆ. ರಾಮ ಎಂದರೆ ಭಾರತದ ಆಧಾರ. ರಾಮ ಎಂದರೆ ಭಾರತದ ನಿಯಮ. ರಾಮ ಎಂದರೆ ಭಾರತದ ಪ್ರಜ್ಞೆ. ರಾಮ ಎಂದರೆ ಭಾರದ ಹೆಮ್ಮೆ.
ರಾಮ ಎಂದರೆ ವೈಭವ, ರಾಮ ಎಂದರೆ ಭಾರತದ ಪ್ರಭಾವದೆಂದು ಅವರು ಬಣ್ಣಿಸಿದರು.ರಾಮಮಂದಿರವನ್ನು ನಿರ್ಮಾಣ ಮಾಡಿದರೆ ಇಡೀ ದೇಶವೇ ಹೊತ್ತಿ ಉರಿಯುತ್ತದೆ ಎಂದು ಕೆಲವು ಜನರು ಹೇಳುವ ಕಾಲವಿತ್ತು.
ಅಂತಹ ವ್ಯಕ್ತಿಗಳು ದೇಶದ ಸಾಮಾಜಿಕ ಉತ್ಸಾಹವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಬಾಲರಾಮನ ದೇಗುಲ ನಿರ್ಮಾಣ ಶಾಂತಿ, ತಾಳ್ಮೆ, ಪರಸ್ಪರ ಸೌಹಾರ್ದತೆ ಹಾಗೂ ಸ್ನೇಹದ ಸಂಕೇತ. ದೇಗುಲ ನಿರ್ಮಾಣದಿಂದ ಯಾವುದೇ ಬೆಂಕಿ ಹೊತ್ತಿಕೊಳ್ಳುತ್ತಿಲ್ಲ.
ಶಕ್ತಿಯ ಸೃಷ್ಟಿಗೆ ಕಾರಣವಾಗಿದೆ. ಅದನ್ನೀಗ ನಾವು ನೋಡುತ್ತಿದ್ದೇವೆ ಎಂದರು.ದೇವರಿಂದ ದೇಶಕ್ಕೆ, ರಾಮನಿಂದ ರಾಷ್ಟ್ರಕ್ಕೆ, ವಿಗ್ರಹದಿಂದ ರಾಷ್ಟ್ರಕ್ಕೆ ನಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಮಂದಿರ ನಿರ್ಮಾಣ ತಡವಾಗಿದ್ದಕ್ಕೆ ರಾಮನಲ್ಲಿ ಮೋದಿ ಕ್ಷಮೆ
ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಶತಮಾನಗಳ ಕಾಲ ತಡವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಲ್ಲಿ ಸೋಮವಾರ ಕ್ಷಮೆಯಾಚಿಸಿದರು.
ಪ್ರಾಣಪ್ರತಿಷ್ಠಾಪನೆಯ ಬಳಿಕ ನೆರೆದಿದ್ದ ಗಣ್ಯರನ್ನುದ್ದೇಶಿಸಿ ಮಾತನಾಡಿದ ಅವರು, ‘ನಾನು ಇಂದು ಶ್ರೀರಾಮನಲ್ಲಿ ಕ್ಷಮೆ ಕೇಳುತ್ತೇನೆ.
ಇಷ್ಟು ಶತಮಾನಗಳಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡುವಲ್ಲಿ ನಮ್ಮ ಪ್ರಯತ್ನ, ತ್ಯಾಗ ಮತ್ತು ಪರಿಶ್ರಮದಲ್ಲಿ ಕೊರತೆಯುಂಟಾಗಿದೆ. ಈಗ ಮಂದಿರ ನಿರ್ಮಾಣ ನಿರ್ಮಾಣ ಪೂರ್ಣಗೊಂಡಿದೆ. ರಾಮಲಲ್ಲಾ ನಮ್ಮನ್ನು ಕ್ಷಮಿಸುತ್ತಾನೆ ಎಂದು ನಾನು ನಂಬುತ್ತೇನೆ’ ಎಂದು ಅವರು ಹೇಳಿದರು.
ಇದೀಗ ಭವ್ಯ ಮಂದಿರ ನಿರ್ಮಾಣವಾಗಿದೆ. ಹೀಗಾಗಿ ರಾಮಲಲ್ಲಾ ಇನ್ನು ಮುಂದೆ ಟೆಂಟ್‌ನಲ್ಲಿರುವುದಿಲ್ಲ. ಜ.22ರ ಸೂರ್ಯೋದಯ ಹೊಸದನ್ನು ನೀಡಿದೆ. ಈ ದಿನಾಂಕವನ್ನು ಕೇವಲ ಕ್ಯಾಲೆಂಡರ್‌ನಲ್ಲಿ ಬರೆದಿಡುವುದಲ್ಲ. ಇದು ಹೊಸ ಕಾಲದ ಉದಯವಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.