ಸಾರಾಂಶ
ನವದೆಹಲಿ : ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಉದ್ದೇಶದಿಂದ ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಮಾತನಾಡಿದ್ದ ಪ್ರಧಾನಿ ಮೋದಿ, ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರೊಂದಿಗೂ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.
‘ಅಧ್ಯಕ್ಷ ಜೆಲೆನ್‌ಸ್ಕಿ ಅವರೊಂದಿಗೆ ಮಾತನಾಡಿದೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರ ದೃಷ್ಟಿಕೋನಗಳನ್ನು ಕೇಳಿ ಸಂತೋಷವಾಗಿದೆ. ಸಂಘರ್ಷದ ಶೀಘ್ರ ಮತ್ತು ಶಾಂತಿಯುತ ಪರಿಹಾರದ ಅಗತ್ಯದ ಬಗ್ಗೆ ನಾನು ಭಾರತದ ಸ್ಥಿರ ನಿಲುವನ್ನು ತಿಳಿಸಿದ್ದೇನೆ. ಉಕ್ರೇನ್‌ನೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಈ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡಲು ಭಾರತ ಬದ್ಧವಾಗಿದೆ’ ಎಂದು ಮೋದಿ ತಿಳಿಸಿದ್ದಾರೆ.
ಇದೇ ವೇಳೆ, ಮಾತುಕತೆ ಕುರಿತು ತಿಳಿಸಿದ ಜೆಲೆನ್‌ಸ್ಕಿ, ‘ನಮ್ಮ ಜನರಿಗೆ ಬೆಂಬಲ ನೀಡುವ ಹಿತಕರ ಮಾತುಗಳಿಗಾಗಿ ನಾನು ಪ್ರಧಾನಿ ಮೋದಿಯವರಿಗೆ ಕೃತಜ್ಞನಾಗಿದ್ದೇನೆ. ಉಕ್ರೇನ್‌ನೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತವು ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡಲು ಬದ್ಧವಾಗಿದೆ. ರಷ್ಯಾ ವಿರುದ್ಧದ ನಿರ್ಬಂಧಗಳ ಬಗ್ಗೆಯೂ ನಾವು ವಿವರವಾಗಿ ಚರ್ಚಿಸಿದ್ದೇವೆ. ಈ ಯುದ್ಧವನ್ನು ಮುಂದುವರಿಸದಂತೆ ರಷ್ಯಾದ ಆರ್ಥಿಕ ಶಕ್ತಿ ಕುಂದಿಸಲು ಅದರಿಂದ ಇಂಧನ ಆಮದು, ವಿಶೇಷವಾಗಿ ತೈಲದ ಆಮದನ್ನು ಕಡಿಮೆ ಮಾಡಿ’ ಎಂದು ಮೋದಿಗೆ ಮನವಿ ಮಾಡಿದ್ದಾರೆ.
15ಕ್ಕೆ ಪುಟಿನ್ ಭೇಟಿ ಆಗುವೆ: ಟ್ರಂಪ್
ವಾಷಿಂಗ್ಟನ್: ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ಉಕ್ರೇನ್-ರಷ್ಯಾ ಕದನಕ್ಕೆ ವಿರಾಮ ಹಾಕಲು ಯತ್ನಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಶುಕ್ರವಾರ ರಷ್ಯಾಗೆ ಹೋಗುತ್ತಿದ್ದೇನೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದೇನೆ’ ಎಂದು ತಿಳಿಸಿದ್ದಾರೆ.