ಜಾಗತಿಕ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ : ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗಿ

| Published : Sep 24 2024, 01:49 AM IST / Updated: Sep 24 2024, 07:03 AM IST

ಸಾರಾಂಶ

ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮುತ್ತಿದ್ದು, ಈ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಜಾಗತಿಕ ಕಂಪನಿಗಳ ಸಿಇಒಗಳಿಗೆ ಕರೆ ನೀಡಿದ್ದಾರೆ. ಭಾರತದೊಂದಿಗೆ ಪಾಲುದಾರಿಕೆ, ಜಂಟಿ ಉದ್ಯಮಗಳು ಮತ್ತು ಸಹ-ಉತ್ಪಾದನೆಯ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳುವಂತೆ ಅವರು ಕೋರಿದರು.

ನವದೆಹಲಿ: ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗುವತ್ತ ಭಾರತ ಹೆಜ್ಜೆ ಹಾಕುತ್ತಿದ್ದು, ಭಾರತದ ಈ ಅಭಿವೃದ್ಧಿಯಲ್ಲಿ ನೀವೂ ಭಾಗಿಯಾಗಿ ಎಂದು ಜಾಗತಿಕ ಕಂಪನಿಗಳ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಾನುವಾರ ಇಲ್ಲಿ ಅಮೆರಿಕದ ಪ್ರಮುಖ ಕಂಪನಿಗಳ ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಪ್ರಧಾನಿಯಾಗಿ ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಎಲ್ಲಾ ಪ್ರಯತ್ನ ನಡೆಸಲಾಗುವುದು. ಭಾರತದ ಈ ಅಭಿವೃದ್ಧಿ ಕಥೆ ಲಾಭ ಪಡೆಯಲು ಕಂಪನಿಗಳು ಮುಂದಾಗಬೇಕು. ಭಾರತದ ಜೊತೆ ಪಾಲುದಾರಿಕೆ ಮೂಲಕ, ಜಂಟಿ ಅಭಿವೃದ್ಧಿ ಯೋಜನೆಗಳ ಮೂಲಕ, ವಿನ್ಯಾಸದಲ್ಲಿ ಸಹ ಪಾಲುದಾರರಾಗುವ ಮೂಲಕ ಮತ್ತು ಸಹ ಉತ್ಪಾದಕರಾಗುವ ಮೂಲಕ ಅಭಿವೃದ್ಧಿಯ ಭಾಗವಾಗಿ ಎಂದು ಮೋರಿ ಕರೆ ನೀಡಿದರು.

ಇದೇ ವೇಳೆ ಎಲೆಕ್ಟ್ರಾನಿಕ್ಸ್‌, ಐಟಿ ವಲಯ ಮತ್ತು ಸೆಮಿಕಂಡಕ್ಟರ್‌ ವಲಯದಲ್ಲಿ ಭಾರತದಲ್ಲಿ ಭಾರೀ ಬದಲಾವಣೆ ಆಗುತ್ತಿದೆ. ಸೆಮಿಕಂಡಕ್ಟರ್ ವಲಯದಲ್ಲಿ ಭಾರತವನ್ನು ಜಾಗತಿಕ ಹಬ್‌ ಮಾಡುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು.

ನಿವಿಡಾ, ಗೂಗಲ್‌ ಸ್ಪಂದನೆ:

ಸಭೆ ಬಳಿಕ ಮಾತನಾಡಿದ ನಿವಿಡಾ ಸಿಇಒ ಜೆನ್ಸೆನ್‌ ಹುವಾಂಗ್‌, ‘ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಹೊಸತನದ ಬಗ್ಗೆ, ಅದರ ಸಾಮರ್ಥ್ಯದ ಬಗ್ಗೆ ಮತ್ತು ಭಾರತದಲ್ಲಿ ಅದರ ಅವಕಾಶಗಳ ಬಗ್ಗೆ ಅರಿಯಲು ಮೋದಿ ಸದಾ ಕಾತರರಾಗಿರುತ್ತಾರೆ ಎಂದು ಹೇಳಿದರು.

ಗೂಗಲ್ ಸಿಇಒ ಸುಂದರ್ ಪಿಚೈ ಮಾತನಾಡಿ, ‘ಮೋದಿ ಡಿಜಿಟಲ್‌ ಇಂಡಿಯಾ ಮೂಲಕ ಭಾರತವನ್ನು ಬದಲಾವಣೆ ಮಾಡುವ ಗುರಿ ಹೊಂದಿದ್ದಾರೆ. ಅವರ ಈ ಪ್ರೋತ್ಸಾಹದ ಕಾರಣ ಗೂಗಲ್‌ ಕೂಡಾ ಮೇಕ್‌ ಇನ್ ಇಂಡಯಾ ಮತ್ತು ಡಿಸೈನ್‌ ಇನ್‌ ಇಂಡಿಯಾದತ್ತ ಹೆಜ್ಜೆ ಇಡಲು ಸಾಧ್ಯವಾಗಿದೆ. ಅವರು ನಮ್ಮನ್ನು ಆರೋಗ್ಯ, ಶಿಕ್ಷಣ, ಕೃಷಿ ವಿಷಯದಲ್ಲಿ ಚಿಂತಿಸುವ ಸವಾಲು ಮುಂದಿಟ್ಟಿದ್ದಾರೆ’ ಎಂದರು.