ಸಾರಾಂಶ
ತ್ರಿಶ್ಶೂರು: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ದೇಶದ ಹಲವು ದೇಗುಲಗಳನ್ನು ಸಂದರ್ಶಿಸುತ್ತಿರುವ ಪ್ರಧಾನ ನರೇಂದ್ರ ಮೋದಿ ಬುಧವಾರ ಕೇರಳದ ಗುರುವಾಯೂರು ಕೃಷ್ಣ ಹಾಗೂ ತಿರುಪ್ರಾಯೂರಿನ ರಾಮಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಸಾಂಪ್ರದಾಯಿಕ ಮುಂಡು (ಪಂಚೆ) ಮತ್ತು ವೇಷ್ಟಿ (ಬಿಳಿ ಶಾಲು)ವಸ್ತ್ರ ತೊಟ್ಟು ಕೃಷ್ಣ ದೇಗುಲಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ ಅಲ್ಲಿ ನಡೆಯುತ್ತಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ನವವಧುಗಳಿಗೆ ಅಕ್ಷತೆ ಹಾಕಿ ಹರಸಿದರು.
ನಂತರ ಬಿಜೆಪಿ ನಾಯಕ ಹಾಗೂ ಮಲಯಾಳಿ ನಟ ಸುರೇಶ್ ಗೋಪಿ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡರು. ಮದುವೆಗೆ ಬಂದಿದ್ದ ಪ್ರಖ್ಯಾತ ಮಲಯಾಳಿ ನಟರು ಮೋದಿ ಅವರನ್ನು ಮಾತನಾಡಿಸಿದರು.
ಬಳಿಕ ಅಲ್ಪ ದೂರದಲ್ಲಿರುವ ಐತಿಹಾಸಿಕ ತಿರುಪ್ರಾಯೂರಿನ ರಾಮಸ್ವಾಮಿ ದೇಗುಲಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ರಾಮಸ್ವಾಮಿ ದೇಗುಲದಲ್ಲಿ ಶ್ರೀರಾಮನು ನಾಲ್ಕು ಕೈಗಳಲ್ಲಿ ವಿವಿಧ ವಸ್ತುಗಳನ್ನು ಹಿಡಿದು ನಿಂತಿರುವ ವಿಗ್ರಹವಿದೆ.
ಅಲ್ಲಿಗೆ ಕೇರಳಿಗರ ಪವಿತ್ರ ತಿಂಗಳು ಕರ್ಕಿಡಾಕಂನಲ್ಲಿ ನಳಂಬಾಕಂ ಯಾತ್ರೆ ಕೈಗೊಳ್ಳುವುದು ಶ್ರೇಷ್ಠವೆಂದು ನಂಬಲಾಗಿದೆ.