ಬೆಲೆ ಏರಿಕೆ, ನಿರುದ್ಯೋಗ, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೊದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ‘ಜನರು ಸರ್ಕಾರದ ಲೂಟಿಯಿಂದ ಬದುಕುಳಿಯಲು ಕಷ್ಟ ಪಡುತ್ತಿರುವಾಗ ಮೋದಿಯವರು ಜನರು ತಮ್ಮ ಮೆಲೋಡಿ (ಸ್ವಾದ) ಆನಂದಿಸಬೇಕು ಎಂದು ಬಯಸುತ್ತಾರೆ. 

ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೊದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ‘ಜನರು ಸರ್ಕಾರದ ಲೂಟಿಯಿಂದ ಬದುಕುಳಿಯಲು ಕಷ್ಟ ಪಡುತ್ತಿರುವಾಗ ಮೋದಿಯವರು ಜನರು ತಮ್ಮ ಮೆಲೋಡಿ (ಸ್ವಾದ) ಆನಂದಿಸಬೇಕು ಎಂದು ಬಯಸುತ್ತಾರೆ. ಆರ್ಥಿಕತೆಯ ಪ್ರತಿ ಅಂಶವೂ ಸಂಕಷ್ಟದಲ್ಲಿದೆ. ಆದರೆ ಮೋದಿ ಈ ಗಂಭೀರ ಹೊರೆಯನ್ನು ಹೊರುವಂತೆ ನಾಗರಿಕ ಉಪನ್ಯಾಸ ನೀಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಮೋದಿ-ಮೆಲೋಡಿ ಚಾಕಲೇಟ್‌ಗೆ ರಾಗಾ ಕಿಡಿ 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಚಾಕಲೇಟ್‌ ಹಂಚಿದ್ದನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕಟುವಾಗಿ ಪ್ರಶ್ನಿಸಿದ್ದಾರೆ.

‘ನಮ್ಮ ತಲೆಯ ಮೇಲೆ ಆರ್ಥಿಕ ಬಿರುಗಾಳಿ ಎದ್ದಿದೆ, ಮತ್ತು ನಮ್ಮ ಪ್ರಧಾನಿ ಇಟಲಿಯಲ್ಲಿ ಮಿಠಾಯಿಗಳನ್ನು ಹಂಚುವಲ್ಲಿ ನಿರತರಾಗಿದ್ದಾರೆ! ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ, ಪ್ರಧಾನಿ ನಗುತ್ತಿದ್ದಾರೆ ಮತ್ತು ರೀಲ್ ಮಾಡುತ್ತಿದ್ದಾರೆ. ಬಿಜೆಪಿ ಜನರು ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ನಾಯಕತ್ವವಲ್ಲ, ಇದು ಒಂದು ಪ್ರಹಸನ’ ಎಂದು ರಾಹುಲ್‌ ಟ್ವೀಟ್‌ನಲ್ಲಿ ಚಾಟಿ ಬೀಸಿದ್ದಾರೆ.

ಮೋದಿ ನೀಡಿದ ಚಾಕೊಲೇಟ್ ಲಾಭ ರಿಯಲ್‌ ಎಸ್ಟೇಟ್‌ ಕಂಪನಿಗೆ!

ಮುಂಬೈ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನರೇಂದ್ರ ಮೋದಿ ಅ‍ವರು ಭಾರತದ ಒಂದು ಕಾಲದ ಜನಪ್ರಿಯ ಚಾಕಲೇಟ್‌ ಆದ ಪಾರ್ಲೆ ಪ್ರಾಡಕ್ಟ್ಸ್‌ ಕಂಪನಿಯ ‘ಪಾರ್ಲೆ ಮೆಲೋಡಿ’ ಟಾಫಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ‘ಪಾರ್ಲೆ ಇಂಡಸ್ಟ್ರೀಸ್‌’ನ ಷೇರು ದಿಢೀರ್‌ ಏರಿಕೆಯಾಗಿದೆ!

5 ರುಪಾಯಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಈ ಮೈಕ್ರೋಕ್ಯಾಪ್‌ ಕಂಪನಿಯ ಷೇರು ದರ ಬುಧವಾರ ದಿಢೀರ್‌ ಶೇ.5ರಷ್ಟು ಏರಿಕೆ ಕಂಡು ಅಪ್ಪರ್‌ ಸರ್ಕೀಟ್‌ ತಲುಪಿದ್ದು, 5.25 ಪೈಸೆಯಲ್ಲಿ ವ್ಯವಹಾರ ಮುಕ್ತಾಯಗೊಳಿಸಿದೆ. 

ಹೆಸರು ಒಂದೇ ರೀತಿ, ಕಂಪನಿಗಳೇ ಬೇರೆ:

ಆದರೆ, ಪಾರ್ಲೆ ಇಂಡಸ್ಟ್ರೀಸ್‌ಗೂ ಮೆಲೋಡಿ, ಪಾರ್ಲೆ-ಜಿಯಂಥ ಜನಪ್ರಿಯ ಚಾಕಲೇಟ್, ಬಿಸ್ಕತ್ತುಗಳನ್ನು ಉತ್ಪಾದಿಸುವ ಪಾರ್ಲೆ ಪ್ರಾಡಕ್ಟ್ಸ್‌ಕಂಪನಿಗೂ ಯಾವುದೇ ಸಂಬಂಧ ಇಲ್ಲ. ‘ಪಾರ್ಲೆ’ ಎಂಬ ಒಂದೇ ರೀತಿಯ ಹೆಸರಿನಿಂದಾಗಿ ಹೂಡಿಕೆದಾರರು ಮುಗಿಬಿದ್ದು ಪಾರ್ಲೆ ಇಂಡಸ್ಟ್ರೀಸ್‌ ಷೇರು ಖರೀದಿಸಿದ್ದಾರೆ.ಮೆಲೋಡಿ ಚಾಕಲೇಟ್‌ ಉತ್ಪಾದಿಸುವ ಪಾರ್ಲೆ ಪ್ರಾಡಕ್ಟ್ಸ್‌ಷೇರುಪೇಟೆಯಲ್ಲೇ ಇಲ್ಲ. ಪಾರ್ಲೆ ಇಂಡಸ್ಟ್ರೀಸ್‌ ಸಾಫ್ಟ್‌ವೇರ್‌, ರಿಯಲ್‌ ಎಸ್ಟೇಟ್‌ ಮತ್ತು ಕಾಗದದ ರೀಸೈಕಲಿಂಗ್‌ ಮಾಡುವ ಕಂಪನಿಯಾಗಿದೆ.