ಸಾರಾಂಶ
ನವದೆಹಲಿ: ಭಾರತದ ಇತಿಹಾಸದಲ್ಲೇ ಮಹಿಳೆಯರು ಅಧಿಕ ಪ್ರಮಾಣದಲ್ಲಿ ತಮ್ಮ ಬಳಿಯಿದ್ದ ಚಿನ್ನವನ್ನು ಮಾರಾಟ ಇಲ್ಲವೇ ಅಡವಿಟ್ಟು ಕಳೆದುಕೊಂಡಿದ್ದು ತಮ್ಮ ಅವಧಿಯಲ್ಲಿ ಎಂಬ ಕುಖ್ಯಾತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯದರ್ಶಿ ಜೈರಾಂ ರಮೇಶ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜೈರಾಂ ರಮೇರ್ಶ್, ‘ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಬಳಿಯಿದ್ದ ಚಿನ್ನವನ್ನು ಮಾರಾಟ ಇಲ್ಲವೇ ಅಡವಿಟ್ಟು ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ರೂಪಿಸಿದ ಅಸಮರ್ಪಕ ಆರ್ಥಿಕ ನೀತಿಗಳೇ ಕಾರಣ.
ಕೋವಿಡ್ ಅವಧಿಯಲ್ಲಿ ಮಹಿಳೆಯರು 60000 ಕೋಟಿ ರು. ಮೌಲ್ಯದ ಚಿನ್ನವನ್ನು ಅಡವಿಟ್ಟು ಬಳಿಕ ಅದನ್ನು ಬಿಡಿಸಿಕೊಳ್ಳಲಾಗದೇ ಹೋದಾಗ ಬ್ಯಾಂಕ್‌ಗಳು ಕರುಣೆಯಿಲ್ಲದೆ ಹರಾಜು ಹಾಕಿದವು. ಜೊತೆಗೆ ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ಚಿನ್ನದ ಮೇಲಿನ ಸಾಲವು ಮೊದಲ ಬಾರಿಗೆ 1 ಲಕ್ಷ ಕೋಟಿ ರು. ದಾಟಿದೆ. ಕಳೆದ 5 ವರ್ಷಗಳಲ್ಲಿ ಚಿನ್ನ ಸಾಲ ಪಡೆಯುವಿಕೆ ಶೇ.300ರಷ್ಟು ಏರಿದೆ’ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಭಾನುವಾರವಷ್ಟೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರ ಮಂಗಳಸೂತ್ರ ಕಸಿಯಲಿದೆ ಎಂದು ಆರೋಪಿಸಿದ್ದರು.