ಪರಸ್ಪರ ವಿಶ್ವಾಸ ಮುಂದಿನ ದಿನಗಳಲ್ಲಿ ಆದ್ಯತೆಯಾಗಲಿ : ಚೀನಾಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಲಹೆ

| Published : Oct 24 2024, 12:30 AM IST / Updated: Oct 24 2024, 04:56 AM IST

ಪರಸ್ಪರ ವಿಶ್ವಾಸ ಮುಂದಿನ ದಿನಗಳಲ್ಲಿ ಆದ್ಯತೆಯಾಗಲಿ : ಚೀನಾಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಲಡಾಖ್‌ ವಲಯದಲ್ಲಿನ ಸಂಘರ್ಷದ ವಾತಾವರಣ ತಿಳಿಗೊಳಿಸುವ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.

ಕಝಾನ್‌: ಲಡಾಖ್‌ ವಲಯದಲ್ಲಿನ ಸಂಘರ್ಷದ ವಾತಾವರಣ ತಿಳಿಗೊಳಿಸುವ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ. ರಷ್ಯಾದ ಕಝಾನ್‌ನಲ್ಲಿ ನಡೆಯುತ್ತಿರುವ ಸಾರ್ಕ್‌ ದೇಶಗಳ ಶೃಂಗ ಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ಬುಧವಾರ ನಡೆದ ಮಹತ್ವದ ದಿಪಕ್ವೀಯ ಮಾತುಕತೆ ವೇಳೆ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ.

ಬುಧವಾರದ ಮಾತುಕತೆ ವೇಳೆ ಉಭಯ ನಾಯಕರು,‘ಎರಡೂ ದೇಶಗಳ ನಡುವೆ ಶಾಂತಿಯುತ ಹಾಗೂ ಸ್ಥಿರ ಸಂಬಂಧ ಸ್ಥಾಪಿಸುವ ಕುರಿತು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಬುದ್ಧತೆ, ಪರಸ್ಪರರನ್ನು ಗೌರವಿಸುವ ಮೂಲಕ ಭಾರತ ಮತ್ತು ಚೀನಾ ಶಾಂತಿಯುತ ಹಾಗೂ ಸ್ಥಿರ ಸಂಬಂಧವನ್ನು ಹೊಂದಬಹುದು ಎಂಬ ನಿಲುವನ್ನು ಎರಡೂ ದೇಶಗಳ ವ್ಯಕ್ತಪಡಿಸಿವೆ.

2020ರಲ್ಲಿ ಲಡಾಖ್‌ನಲ್ಲಿ ಉಭಯ ದೇಶಗಳ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಬಳಿಕ ಇದು ಭಾರತ ಮತ್ತು ಚೀನಾ ನಡುವೆ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ಎಂಬುದು ಗಮನಾರ್ಹ.

ಮತ್ತಷ್ಟು ಮಾತುಕತೆ:

ಈ ವೇಳೆ ಗಡಿಯಲ್ಲಿ ಏರ್ಪಟ್ಟಿರುವ ಸಂಘರ್ಷದ ಸನ್ನಿವೇಶದ ಕುರಿತು ಮೋದಿ- ಜಿನ್‌ಪಿಂ ಚರ್ಚೆ ನಡೆಸಿದ್ದು, ಇದನ್ನು ಬಗೆಹರಿಸುವಲ್ಲಿ ವಿಶೇಷ ಪ್ರತಿನಿಧಿಗಳು ಮಹತ್ವದ ಪಾತ್ರ ವಹಿಸಲಿದ್ದು, ಅವರ ಮುಂದಿನ ಸಭೆಗೆ ಸೂಕ್ತ ದಿನಾಂಕ ನಿಗದಿಪಡಿಸಲು ಒಪ್ಪಿದ್ದಾರೆ.

ನಂಬಿಕೆ, ಗೌರವ 

:ದ್ವಿಪಕ್ಷೀಯ ಮಾತುಕತೆ ವೇಳೆ, ‘ಭಾರತ-ಚೀನಾ ಸಂಬಂಧವು ನಮ್ಮ ದೇಶದ ಜನತೆಗೆ ಹಾಗೂ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಅಗತ್ಯ. ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ ಮೂಲಕ ಇದನ್ನು ಸಾಧಿಸಲು ಸಾಧ್ಯ. ಎರಡೂ ದೇಶಗಳ ನಡುವಿನ ವಿವಿಧತೆಗಳು ಮತ್ತು ಸಂಘರ್ಷಗಳು ಶಾಂತಿಯನ್ನು ಕೆಡಿಸದಂತೆ ನಿಭಾಯಿಸುವುದು ಅಗತ್ಯ. 4 ವರ್ಷಗಳ ಗಡಿ ಸಮಸ್ಯೆಗಳ ಬಗ್ಗೆ ಕೈಗೊಂಡಿರುವ ಒಮ್ಮತದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿರಬೇಕು. ಪರಸ್ಪರ ನಂಬಿಕೆ, ಗೌರವ ಹಾಗೂ ಸೂಕ್ಷ್ಮತೆ ದ್ವಿಪಕ್ಷೀಯ ಸಂಬಂಧದ ಆಧಾರವಾಗಿರಬೇಕು. ಈ ಕುರಿತ ಮಾತುಕತೆಗಳನ್ನು ಮುಕ್ತಮನಸ್ಸಿನಿಂದ ನಡೆಸುತ್ತೇವೆ ಎಂದು ನಂಬಿದ್ದೇನೆ ಎಂದು ಸಭೆಯಲ್ಲಿ ಚೀನಾ ಉದ್ದೇಶಿಸಿ ಮೋದಿ ಮಾತನಾಡಿದ್ದಾರೆ.

ಉಗ್ರ ನಿಗ್ರಹದಲ್ಲಿ ಇಬ್ಬಗೆ ನೀತಿ ಬೇಡ: ಚೀನಾಗೆ ಮೋದಿ ಟಾಂಗ್‌

ಕಝಾನ್‌: ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಜಗತ್ತು ಒಗ್ಗಟ್ಟಿನಿಂದ ಮುನ್ನಡೆಯುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಪ್ರತಿಪಾದಿಸಿದ್ದಾರೆ.ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗದಲ್ಲಿ ಬುಧವಾರ ಮಾತನಾಡಿದ ಅವರು ‘ಭಯೋತ್ಪಾದನೆಯ ವಿಷಯದಲ್ಲಿ ಯಾವ ದೇಶವೂ ಇಬ್ಬಗೆಯ ನೀತಿಯನ್ನು ಹೊಂದಿರಬಾರದು. ಭಯೋತ್ಪಾದನೆಗೆ ಹಣ ಹರಿಯುವುದನ್ನು ಮೊದಲು ನಿಲ್ಲಿಸಬೇಕು. ಯುವಕರ ತಲೆಕೆಡಿಸಿ ಉಗ್ರವಾದಕ್ಕೆ ಸೆಳೆಯುವುದನ್ನು ತಪ್ಪಿಸಬೇಕು. ವಿಶ್ವಸಂಸ್ಥೆ ಕೂಡ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೈಬರ್‌ ಸೆಕ್ಯುರಿಟಿ ಬಗ್ಗೆಯೂ ಗರಿಷ್ಠ ಗಮನ ಹರಿಸಬೇಕು’ ಎಂದು ಹೇಳಿದರು.

ಪಾಕಿಸ್ತಾನಿ ಬೆಂಬಲಿತ ಉಗ್ರ ಸಂಘಟನೆಗಳು ಮತ್ತು ಉಗ್ರರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೂಲಕ ಘೋಷಿತ ಅಪರಾಧಿಗಳು ಎಂದು ಘೋಷಿಸುವ ಭಾರತದ ಹಲವು ಪ್ರಸ್ತಾಪಗಳಿಗೆ ಚೀನಾ ವಿಟೋ ಅಧಿಕಾರ ಬಳಸಿ ತಡೆ ನೀಡಿತ್ತು. ಹೀಗಾಗಿ ಮೋದಿ ಹೇಳಿಕೆ ನೇರವಾಗಿ ಚೀನಾ ಉದ್ದೇಶಿಸಿಯೇ ಆಡಿದ್ದು ಎಂದು ವಿಶ್ಲೇಷಿಸಲಾಗಿದೆ.

ಬ್ರಿಕ್ಸ್‌ಗೆ ಹೊಸ ದೇಶಗಳ ಸೇರ್ಪಡೆ:

ಬ್ರಿಕ್ಸ್‌ ಒಕ್ಕೂಟಕ್ಕೆ ಹೊಸ ದೇಶಗಳನ್ನು ಸೇರಿಸಿಕೊಳ್ಳಲು ಭಾರತದ ಸಹಮತವಿದೆ. ಇದಕ್ಕೆ ಒಮ್ಮತದ ನಿರ್ಧಾರವಾಗಬೇಕು. ಈ ವಿಷಯದಲ್ಲಿ ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯ ರಾಷ್ಟ್ರಗಳ ಅಭಿಪ್ರಾಯವನ್ನು ಗೌರವಿಸಬೇಕು. ಜೋಹಾನ್ಸ್‌ಬರ್ಗ್‌ ಶೃಂಗದಲ್ಲಿ ಅಂಗೀಕರಿಸಿದ ಮೂಲಭೂತ ತತ್ವಗಳನ್ನು ಎಲ್ಲಾ ದೇಶಗಳೂ ಪಾಲಿಸಬೇಕು ಎಂದು ಹೇಳಿದ ಮೋದಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗಬೇಕು ಎಂದು ಪುನಃ ಪ್ರತಿಪಾದಿಸಿದರು.

ವ್ಯಾಪಾರ ವೃದ್ಧಿ, ಸ್ಥಳೀಯ ಕರೆನ್ಸಿಯಲ್ಲಿ ವಹಿವಾಟಿಗೆ ಬ್ರಿಕ್ಸ್ ಸಮ್ಮತಿ

ಕಝಾನ್‌: ಪರಸ್ಪರ ವ್ಯಾಪಾರ ಬಲವರ್ಧನೆ, ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಹಾಗೂ ಹಣಕಾಸು ಇತ್ಯರ್ಥ, ಗಾಜಾ ಪಟ್ಟಿಯಲ್ಲಿ ಶಾಶ್ವತ ಯುದ್ಧ ವಿರಾಮ ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡ ಜಂಟಿ ಹೇಳಿಕೆಯನ್ನು ಬುಧವಾರ ಇಲ್ಲಿ ಮುಕ್ತಾಯಗೊಂಡ 16ನೇ ಬ್ರಿಕ್ಸ್‌ ದೇಶಗಳ ಸಮ್ಮೇಳನದ ಅಂತ್ಯದಲ್ಲಿ ಬಿಡುಗಡೆ ಮಾಡಲಾಗಿದೆ.- ಪರಸ್ಪರ ನಡುವೆ ಆರ್ಥಿಕ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು

- ಬ್ರಿಕ್ಸ್‌ ದೇಶಗಳ ನಡುವೆ ಹೊಸದಾದ ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆ- ಬ್ರಿಕ್ಸ್‌ ದೇಶಗಳ ಬ್ಯಾಂಕ್‌ನ ಸದಸ್ಯತ್ವ ಇನ್ನಷ್ಟು ದೇಶಗಳಿಗೆ ವಿಸ್ತರಣೆ

- ಗಡಿಯಾಚೆಗಿನ ಪಾವತಿಗೆ ಸುರಕ್ಷಿತ, ಅಗ್ಗ, ಪಾರದರ್ಶಕ ವ್ಯವಸ್ಥೆ ಅಭಿವೃದ್ಧಿ- ಪರಸ್ಪರ ನಡುವೆ ಹಣಕಾಸು ಪಾವತಿ ಸ್ಥಳೀಯ ಕರೆನ್ಸಿಗಳಲ್ಲೇ ಮಾಡುವುದು

- ಗಾಜಾ ಪಟ್ಟಿ ಪ್ರದೇಶದಲ್ಲಿ ಶಾಶ್ವತ ಕದನ ವಿರಾಮಕ್ಕೆ ಆಗ್ರಹ- ಎರಡೂ ಕಡೆಯಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸೂಚನೆ