ಸೇನಾ ಸಮವಸ್ತ್ರದಲ್ಲಿ ಬಂದು ಐಸಿಸ್‌ ಉಗ್ರರ ದಾಳಿ

| Published : Mar 24 2024, 01:31 AM IST / Updated: Mar 24 2024, 01:53 PM IST

ಸಾರಾಂಶ

ರಷ್ಯಾ ರಾಜಧಾನಿಯಲ್ಲಿನ ‘ಕ್ರೋಕಸ್ ಸಿಟಿ ಹಾಲ್’ ಸಭಾಂಗಣದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಕ್ಷಣಗಳ ಬಗ್ಗೆ ಕೆಲವು ಪ್ರತ್ಯಕ್ಷದರ್ಶಿಗಳು ಅನುಭವ ಹಂಚಿಕೊಂಡಿದ್ದಾರೆ.

ಮಾಸ್ಕೋ: ರಷ್ಯಾ ರಾಜಧಾನಿಯಲ್ಲಿನ ‘ಕ್ರೋಕಸ್ ಸಿಟಿ ಹಾಲ್’ ಸಭಾಂಗಣದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಕ್ಷಣಗಳ ಬಗ್ಗೆ ಕೆಲವು ಪ್ರತ್ಯಕ್ಷದರ್ಶಿಗಳು ಅನುಭವ ಹಂಚಿಕೊಂಡಿದ್ದಾರೆ.

‘ಸೇನಾ ಸಮವಸ್ತ್ರದಲ್ಲಿ ಬಂದು ಉಗ್ರರು ದಾಳಿ ಮಾಡಿದರು. ಅವರು ಸಿಡಿಸಿದ ಗುಂಡಿಗೆ ಬೆಚ್ಚಿ ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದಾಗ ಕಾಲ್ತುಳಿತ ಸಂಭವಿಸಿತು’ ಎಂದಿದ್ದಾರೆ.

ಸಿಟಿ ಹಾಲ್‌ನಲ್ಲಿ ಸಂಗೀತ ಸಮಾರಂಭ ಆಯೋಜನೆ ಆಗಿತ್ತು. ಸುಮಾರು 6 ಸಾವಿರ ಜನ ಸೇರಿದ್ದರು. ಸಂಗೀತ ಕಚೇರಿ ಪ್ರಾರಂಭವಾಗುವ ಕೆಲವು ನಿಮಿಷಗಳ ಮೊದಲು ಸ್ವಯಂಚಾಲಿತ ಗುಂಡಿನ ಸದ್ದು ಕೇಳಿಸಿತು. 

ಇದು ಸ್ವಯಂಚಾಲಿತ ಗುಂಡಿನ ದಾಳಿ ಎಂದು ನಾನು ಈಗಿನಿಂದಲೇ ಅರಿತುಕೊಂಡೆ ಮತ್ತು ಇದು ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿ ಎಂದು ಕೂಡಲೇ ಅರ್ಥ ಮಾಡಿಕೊಂಡೆ’ ಎಂದು ಅಲೆಕ್ಸಿ ಎಂಬ ಪ್ರತ್ಯಕ್ಷದರ್ಶಿ ಹೇಳಿದರು.

‘ದಾಳಿಕೋರರು ಸೇನಾ ಸಮವಸ್ತ್ರವನ್ನು ಧರಿಸಿದ್ದರು. ಮುಖ ಮುಚ್ಚಿಕೊಂಡಿದ್ದರು. ಯಾರೆಂದು ಗೊತ್ತಾಗುತ್ತಿರಲಿಲ್ಲ. ಅವರು ಕಟ್ಟಡಕ್ಕೆ ಪ್ರವೇಶಿಸಿ ಗುಂಡು ಹಾರಿಸಿದರಷ್ಟೇ ಅಲ್ಲ, ಗ್ರೆನೇಡ್ ಅಥವಾ ಬೆಂಕಿಯಿಡುವ ಬಾಂಬ್ ಎಸೆದರು’ ಎಂದು ಪತ್ರಕರ್ತರೊಬ್ಬರು ಹೇಳಿದರು.

ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿ ಒಬ್ಬರು ಘಟನೆಯ ವಿವರ ನೀಡಿ, ‘ಇದ್ದಕ್ಕಿದ್ದಂತೆ ನಮ್ಮ ಹಿಂದೆ ಭಾರಿ ಪ್ರಮಾಣದ ಶಬ್ದ ಕೇಳಿಸಿತು. ಗುಂಡುಗಳು ಸಿಡಿದವು. 

ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ. ತಕ್ಷಣವೇ ಕಾಲ್ತುಳಿತ ಪ್ರಾರಂಭವಾಯಿತು. ಎಲ್ಲರೂ ಎಸ್ಕಲೇಟರ್‌ಗೆ ಓಡಿದರು. ಎಲ್ಲರೂ ಕಿರುಚುತ್ತಿದ್ದರು’ ಎಂದರು.

‘ಘಟನೆಯ ಕೆಲವೇ ಹೊತ್ತಿನಲ್ಲಿ ಹಾಲ್‌ನ ಮೇಲ್ಛಾವಣಿಯಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಬರುತ್ತಿರುವುದನ್ನು ಕಂಡೆ. ಮೇಲ್ಛಾವಣಿಯ ಒಂದು ಭಾಗ ಕುಸಿಯಿತು’ ಎಂದು ಬೇಸರಿಸಿದರು.