ಶುಕ್ರವಾರ ಇರಾನ್‌ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌, ಈ ದಾಳಿಯನ್ನು ಇರಾನ್‌ನೊಳಗಿಂದಲೇ ಸಂಘಟಿಸಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.  

 ಟೆಲ್‌ ಅವೀವ್‌: ಶುಕ್ರವಾರ ಇರಾನ್‌ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌, ಈ ದಾಳಿಯನ್ನು ಇರಾನ್‌ನೊಳಗಿಂದಲೇ ಸಂಘಟಿಸಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಇದು ಶತ್ರು ದೇಶದೊಳಗೆ ನುಗ್ಗಿ ದಾಳಿ ನಡೆಸುವ ಇಸ್ರೇಲ್‌, ಅದರ ಸೇನೆ ಮತ್ತು ಅದರ ಗುಪ್ತಚರ ಸಂಸ್ಥೆ ಮೊಸಾದ್‌ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಇಟ್ಟಿದೆ.

ಭದ್ರತಾ ಪಡೆಯ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಕುರಿತು ವರದಿ ಪ್ರಕಟಿಸಿರುವ ‘ದ ಟೈಮ್ಸ್‌ ಆಫ್‌ ಇಸ್ರೇಲ್‌’ ಪತ್ರಿಕೆ, ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌, ಇಸ್ರೇಲ್‌ನ ರಕ್ಷಣಾ ಪಡೆಗಳ ನಿಕಟ ಸಹಯೋಗದೊಂದಿಗೆ ಇರಾನ್‌ನಲ್ಲೇ ರಹಸ್ಯವಾಗಿ ದಾಳಿ ನೆಲೆ ಸ್ಥಾಪಿಸಿ, ಅಲ್ಲಿಗೇ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಸಾಗಿಸಿ ದಾಳಿ ನಡೆಸಿತ್ತು ಎಂದು ಹೇಳಿದೆ.

ವರದಿಯಲ್ಲೇನಿದೆ?:

ಇರಾನ್‌ನೊಳಗೇ ರಹಸ್ಯವಾಗಿ ಸ್ಥಾಪಿಸಿದ್ದ ಕ್ಷಿಪಣಿ, ಡ್ರೋನ್‌ ಉಡ್ಡಯನ ನೆಲೆಗಳನ್ನು ಇಸ್ರೇಲಿ ಯೋಧರು ರಾತ್ರೋರಾತ್ರಿ ಸಕ್ರಿಯಗೊಳಿಸಿದರು.

ಮತ್ತೊಂದೆಡೆ ಇಸ್ರೇಲ್‌ನ ಇತರೆ ಶಸ್ತ್ರಾಸ್ತ್ರಗಳು ಇರಾನ್‌ನ ವಾಯುರಕ್ಷಣಾ ಪಡೆಯನ್ನು ಧ್ವಂಸಗೊಳಿಸುವ ಕೆಲಸ ಮಾಡಿದವು. ಇದು ಇಸ್ರೇಲ್‌ನ ಯುದ್ಧ ವಿಮಾನಗಳು ತಮ್ಮ ದಾಳಿಯನ್ನು ಸುಗಮವಾಗಿ ನಡೆಸಲು ಅನುವು ಮಾಡಿಕೊಟ್ಟಿತು. ಈ ಹಂತದಲ್ಲೇ ಇರಾನ್‌ನೊಳಗೆ ಪ್ರವೇಶಿಸಿದ್ದ ಮೊಸಾದ್ ಕಮಾಂಡೋಗಳು ಇರಾನ್‌ನೊಳಗಿನಿಂದಲೇ ಇರಾನ್‌ನ ವಾಯುರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ಉಡ್ಡಯನ ಕೇಂದ್ರಗಳನ್ನು ಧ್ವಂಸಗೊಳಿಸುವ ಕೆಲಸ ಮಾಡಿದರು.

ಹೀಗೆ ಏಕಕಾಲಕ್ಕೆ ಇರಾನ್‌ನೊಳಗೆ ಮತ್ತು ಹೊರಗಿನಿಂದಲೂ ಇರಾನ್‌ ಮೇಲೆ ನಡೆಸಿದ ದಾಳಿ, ಇರಾನ್‌ ಸೇನಾಪಡೆಗಳನ್ನು ಸಂಪೂರ್ಣ ವಿಚಲಿತಗೊಳಿಸಿತು ಎಂದು ವರದಿ ತಿಳಿಸಿದೆ.