ಸಾರಾಂಶ
ಶಾಜಾಪುರ: ‘ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರು ಬ್ರಿಟಿಷ್ ಏಜೆಂಟ್’ ಎಂದು ಮಧ್ಯಪ್ರದೇಶ ಸಚಿವ ಇಂದರ್ ಸಿಂಗ್ ಪರ್ಮಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ವಿವಾದ ದೊಡ್ಡದಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಅವರು, ‘ರಾಜಾ ರಾಮ್ ಮೋಹನ್ ರಾಯ್ ಅವರು ಬ್ರಿಟಿಷ್ ಏಜೆಂಟ್. ದೇಶದಲ್ಲಿ ಬ್ರಿಟಿಷರ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು. ಧಾರ್ಮಿಕ ಮತಾಂತರದ ವಿಷವರ್ತುಲವನ್ನು ಪ್ರಾರಂಭಿಸಿದ್ದರು. ಬ್ರಿಟಿಷರು ಹಲವರನ್ನು ಸುಮ್ಮನೇ ಸಮಾಜ ಸುಧಾರಕರು ಎಂದು ಬಿಂಬಿಸಿದ್ದರು. ಮತಾಂತರವನ್ನು ಉತ್ತೇಜಿಸಿದ್ದರು ’ ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು.ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು, ಈ ಬೆನ್ನಲ್ಲೇ ವಿಡಿಯೋ ಮೂಲಕ ಇಂದರ್ ಸಿಂಗ್ ಕ್ಷಮೆಯಾಚಿಸಿದ್ದು, ‘ರಾಜಾ ರಾಮ್ ಮೋಹನ್ ರಾಯ್ ಒಬ್ಬ ಸಮಾಜ ಸುಧಾರಕರು. ಅವರನ್ನು ಗೌರವಿಸಬೇಕು. ಆ ಮಾತು ಬಾಯಿ ತಪ್ಪಿ ಬಂದಿದ್ದು, ಅದಕ್ಕೆ ಬೇಸರವಿದೆ. ಕ್ಷಮೆಯಾಚಿಸುತ್ತೇನೆ . ಯಾವುದೇ ಐತಿಹಾಸಿಕ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶ ನನಗಿರಲಿಲ್ಲ’ ಎಂದಿದ್ದಾರೆ.
==ಛತ್ತೀಸ್‌ಗಢದಲ್ಲಿ 15 ಲಕ್ಷ ಇನಾಮು ಹೊಂದಿದ್ದ 3 ನಕ್ಸಲರ ಹತ್ಯೆ
ಪಿಟಿಐ ಸುಕ್ಮಾನಕ್ಸಲ್ ನಿಗ್ರಹಕ್ಕೆ ಪಣತೊಟ್ಟಿರುವ ಛತ್ತೀಸ್‌ಗಢದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಭಾನುವಾರ ಭದ್ರತಾ ಪಡೆಗಳ ಗುಂಡಿಗೆ 15 ಲಕ್ಷ ರು. ಇನಾಮು ಹೊಂದಿದ್ದ ಇಬ್ಬರು ಲೇಡಿ ನಕ್ಸಲರು ಸೇರಿ 3 ಮಾವೋವಾದಿಗಳು ಬಲಿಯಾಗಿರುವ ಘಟನೆ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಈ ವರ್ಷ ಹತರಾದ ನಕ್ಸಲರ ಸಂಖ್ಯೆ 262ಕ್ಕೇರಿಕೆಯಾಗಿದೆ.ಇಲ್ಲಿನ ತುಮಲ್‌ಪಾಡ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಕಾಳಗ ನಡೆದು ಮೂವರು ಬಲಿಯಾಗಿದ್ದಾರೆ. ಈ ವೇಳೆ 303 ರೈಫಲ್, ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳು, ಇತರ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.ಹತ್ಯೆಗೀಡಾದ ನಕ್ಸಲರನ್ನು ಮಹಿಳಾ ನಕ್ಸಲೀಯರಾದ ಮದ್ವಿ ದೇವಾ, ಸೋಧಿ ಗಂಗಿ ಜತೆಗೆ ಹಲವರು ಅಮಾಯಕ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ದೇವಾ ಎಂದು ಗುರುತಿಸಲಾಗಿದೆ. ಮೂವರು ತಲೆಗೆ 5 ಲಕ್ಷ ರು. ಇನಾಮು ಹೊಂದಿದ್ದರು.
==ಮತದಾರರ ಪಟ್ಟಿ ಪರಿಷ್ಕರಣೆ ಒತ್ತಡ?: ಗುಮಾಸ್ತ ಆತ್ಮಹತ್ಯೆ
ಕಣ್ಣೂರು(ಕೇರಳ): ಕೇರಳದಲ್ಲಿ ಸದ್ಯದಲ್ಲೇ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಹಂತದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶಾಲಾ ಸಿಬ್ಬಂದಿಯೊಬ್ಬರು ಭಾನುವಾರ ನೇಣುಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಕೆಲಸದ ಒತ್ತಡವೇ ಕಾರಣ ಎಂದು ಕಾಂಗ್ರೆಸ್, ಸಿಪಿಐ ಪಕ್ಷಗಳು ಆರೋಪಿಸಿವೆ.ಆತ್ಮಹತ್ಯೆ ಮಾಡಿಕೊಂಡ ಅನೀಶ್ ಜಾರ್ಜ್ ಅವರು ಪಯ್ಯನೂರು ಸರ್ಕಾರಿ ಶಾಲೆಯಲ್ಲಿ ಗುಮಾಸ್ತರಾಗಿದ್ದು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕೆಲಸಕ್ಕೆ ನಿಯೋಜಿಸಲಾಗಿತ್ತು. ಶನಿವಾರ ತಡರಾತ್ರಿ 2 ಗಂಟೆವರೆಗೂ ಅವರು ಕೆಲಸ ಮಾಡಿದ್ದರು. ಅರ್ಜಿ ಭರ್ತಿ ಮತ್ತು ಗೊತ್ತುಮಾಡಲಾದ ಪ್ರದೇಶದಲ್ಲಿ ಅರ್ಜಿಗಳ ಹಂಚಿಕೆ ಕೆಲಸದಿಂದ ಅವರು ಒತ್ತಡಕ್ಕೊಳಗಾಗಿದ್ದರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಈಗಾಗಲೇ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಕಾಂಗ್ರೆಸ್, ಸಿಪಿಐ(ಎಂ)ನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಈ ಹೊತ್ತಿನಲ್ಲೇ ಆತ್ಮಹತ್ಯೆ ಪ್ರಕರಣ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಿಜಿಲ್ ಮಾಕುಟ್ಟಿ, ಬಿಜೆಪಿಗೆ ಅನುಕೂಲ ಮಾಡಿಕೊಡಲು ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸುತ್ತಿದೆ. ಇವರ ಅಜೆಂಡಾಗೆ ಅನೀಶ್ ಬಲಿಪಶುವಾಗಿದ್ದಾರೆ ಎಂದು ದೂರಿದರು.==
ಪಂಜಾಬಲ್ಲಿ ಅಪರಿಚಿತರ ಗುಂಡೇಟಿಗೆ ಆರೆಸ್ಸೆಸ್ ನಾಯಕನ ಪುತ್ರ ಬಲಿಫಿರೋಜಪುರ: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದಾಳಿಕೋರರು ಇಲ್ಲಿ ಮಳಿಗೆಯೊಂದನ್ನು ನಡೆಸುತ್ತಿದ್ದ ಆರ್‌ಎಸ್‌ಎಸ್ ನಾಯಕರೊಬ್ಬರ ಪುತ್ರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ (ಆರ್‌ಎಸ್‌ಎಸ್) ಸಕ್ರಿಯರಾಗಿರುವ ಬಲದೇವ ರಾಜ್ ಅರೋರಾ ಅವರ ಪುತ್ರ ನವೀನ್ ಅರೋರಾ (32) ಮೃತ ವ್ಯಕ್ತಿ.
ನವೀನ್ ಸಾವಿಗೆ ಬೇಸರ ವ್ಯಕ್ತಪಡಿಸಿರುವ ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನಿಲ್ ಜಾಖಡ್, ಇದು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಎಎಪಿ ಸರ್ಕಾರದ ವೈಫಲ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಟೀಕಿಸಿದ್ದಾರೆ.ಏನಿದು ಘಟನೆ?:ಇಲ್ಲಿಯ ಸಾಧು ಚಂದ್ ಚೌಕ್ ಬಳಿಯ ತನ್ನ ಮನೆಗೆ ತೆರಳಲು ನವೀನ್ ಅಂಗಡಿಯಿಂದ ಹೋಗುತ್ತಿದ್ದಾಗ ಶನಿವಾರ ಘಟನೆ ನಡೆದಿದೆ. ನವೀನ್‌ಗೆ ಎದುರಾಗಿ ಮೋಟರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಕಣ್ಣಳತೆ ದೂರದಲ್ಲಿ ನೇರವಾಗಿ ನವೀನ್‌ಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣ ನವೀನ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
==ಮತಚೋರಿ ಆರೋಪ ಬೋಗಸ್: ಮಾಜಿ ಕಾಂಗ್ರೆಸಿಗ ಶಕೀಲ್
ನವದೆಹಲಿ: ‘ಕಾಂಗ್ರೆಸ್ ಮಾಡುತ್ತಿರುವ ಮತಗಳ್ಳತನದ ಆರೋಪ ಸುಳ್ಳು. 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಪುರಾವೆಯಿಲ್ಲ. ಅಷ್ಟು ಪ್ರಮಾಣದಲ್ಲಿ ಹೆಸರು ಅಳಿಸಿದ್ದರೆ ಕನಿಷ್ಠ 65 ಜನರು ಮುಂದೆ ಬರಬೇಕಿತ್ತು, 5,000 ಜನರಾದರೂ ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ಆದರೆ ಬಿಹಾರದಲ್ಲಿ ಅಂಥದ್ದೇನೂ ಕಂಡುಬರಲಿಲ್ಲ’ ಎಂದು ಕಾಂಗ್ರೆಸ್ ಮಾಜಿ ನಾಯಕ ಶಕೀಲ್ ಅಹ್ಮದ್ ಹೇಳಿದ್ದಾರೆ. ಅವರು ಈ ವಾರದ ಆರಂಭದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.ಬಿಹಾರದಲ್ಲಿ ಸೋಲಿಗೆ ಮತಗಳ್ಳತನವೇ ಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ‘ನಿಜಕ್ಕೂ ಮುಗ್ಧ ಜನರ ಹೆಸರು ಮತಪಟ್ಟಿಯಿಂದ ಅಳಿಸಿಹೋಗಿದ್ದರೆ, ರಾಜಕೀಯ ಪಕ್ಷಗಳು ಬೀದಿಗಿಳಿಯಬೇಕಿತ್ತು. ಅಂತಹದ್ದೇನೂ ಆಗಲಿಲ್ಲ’ ಎಂದು ಚಾಟಿ ಬೀಸಿದರು.
;Resize=(128,128))
;Resize=(128,128))