ಸಾರಾಂಶ
ನವದೆಹಲಿ: ಆಫ್ರಿಕಾದ ದೇಶಗಳಲ್ಲಿ ಸಾಕಷ್ಟು ಸಾವು-ನೋವಿಗೆ ಕಾರಣವಾದ ಮಂಕಿಪಾಕ್ಸ್ ವೈರಸ್‌ನ ಮೊದಲ ಪ್ರಕರಣವೊಂದು ಭಾರತದಲ್ಲಿ ದೃಢಪಟ್ಟಿದೆ. ಮಂಕಿಪಾಕ್ಸ್ ಸಾಂಕ್ರಾಮಿಕ ವ್ಯಾಪಕವಾಗಿದ್ದ ದೇಶಕ್ಕೆ ತೆರಳಿದ್ದ ವೇಳೆ ಯುವಕನೊಬ್ಬನಿಗೆ ಈ ಸೋಂಕು ತಗುಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಮಾಹಿತಿ ನೀಡಿದೆ.
ಆದರೆ ಸೋಂಕಿತ ವ್ಯಕ್ತಿ 26 ವರ್ಷದ ಹರ್ಯಾಣದ ಹಿಸಾರ್ ಮೂಲದವನಾಗಿದ್ದಾನೆ. ಆತನನ್ನು ದಿಲ್ಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆಎಂದು ಅದು ಹೇಳಿದೆ.ಈ ಹಿಂದೆ 2022ರ ಜುಲೈನಿಂದ 2024ರ ಮಾರ್ಚ್ ಅವಧಿಯಲ್ಲಿ 30 ಪ್ರಕರಣಗಳು ಭಾರತದಲ್ಲಿ ದಾಖಲಾಗಿದ್ದವು. ಇದ್ದಿದ್ದರಲ್ಲೇ ಸಮಾಧಾನದ ವಿಷಯವೆಂದರೆ, ಭಾರತದಲ್ಲಿ ಇದೀಗ ಪತ್ತೆಯಾದ ವೈರಸ್‌ನ ಮಾದರಿಯು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲು ಕಾರಣವಾದ ಕಾಂಗೋ ದೇಶದಲ್ಲಿನ ‘ಕ್ಲಾಡ್ 1ಬಿ’ ತಳಿ ಅಲ್ಲ. ಬದಲಾಗಿ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾದ ‘ಕ್ಲಾಡ್- 2’ ತಳಿ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಮೊದಲ ಪ್ರಕರಣ ದೃಢ:ಮಂಕಿಪಾಕ್ಸ್ ವೈರಸ್ ದೃಢಪಟ್ಟ ಕುರಿತು ಮಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘ಈ ಹಿಂದೆ ಶಂಕಿಸಲ್ಪಟ್ಟಿದ್ದ ಮಂಕಿಪಾಕ್ಸ್ ಪ್ರಕರಣ ಇದೀಗ ದೃಢಪಟ್ಟಿದೆ. ಪ್ರಯೋಗಾಲಯದಲ್ಲಿ ಈ ಮಾಹಿತಿ ಖಚಿತವಾಗಿದೆ. ಈ ಹಿಂದೆ 2022ರಲ್ಲಿ 30 ಕೇಸುಗಳು ದಾಖಲಾಗಿದ್ದಂತೆ ಇದು ಕೂಡಾ ಆಯ್ದ ಪ್ರಕರಣ. ಇದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಲು ಕಾರಣವಾದ ಕ್ಲಾಡ್-1 ತಳಿ ಅಲ್ಲ’ ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, ‘ಮಂಕಿಪಾಕ್ಸ್ ಪ್ರಸರಣವಾಗುತ್ತಿರುವ ದೇಶವೊಂದಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇಡಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಆತ ಇತರೆ ಯಾವುದೇ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿಲ್ಲ. ಸದ್ಯ ಈ ಸೋಂಕು ದೊಡ್ಡ ಮಟ್ಟದಲ್ಲಿ ಪ್ರಸರಣಗೊಳ್ಳುವ ಯಾವುದೇ ಸುಳಿವು ಇಲ್ಲ’ ಎಂದು ಸಚಿವಾಲಯ ಧೈರ್ಯ ಹೇಳಿದೆ.ಕ್ಲಾಡ್ 1 ತಳಿ ಆಫ್ರಿಕಾ ದೇಶಗಳಲ್ಲಿ 15000ಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿದ್ದು 530ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.
==ಜಾಗತಿಕ ಪಿಡುಗುಮಂಕಿಪಾಕ್ಸ್ ಸಾಂಕ್ರಾಮಿಕ ಆಫ್ರಿಕಾದ 12 ದೇಶಗಳಲ್ಲಿ ಈ ವರ್ಷವೊಂದರಲ್ಲೇ 500ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು, ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿತ್ತು. ಅಲ್ಲದೆ ಇದರ ಪ್ರಸರಣ ತಡೆಗೆ ಜಾಗತಿಕ ಸಮುದಾಯ ಒಂದಾಗಬೇಕು ಎಂದು ಕರೆ ನೀಡಿತ್ತು. ಅದರ ಬೆನ್ನಲ್ಲೇ ಈ ಸೋಂಕು ಭಾರತಕ್ಕೂ ಪ್ರವೇಶ ಮಾಡಿದೆ.
==ಏನಿದು ಮಂಕಿಪಾಕ್ಸ್?ಇದು ಕೂಡಾ ಸಿಡುಬಿನ ರೀತಿಯ ವೈರಸ್. ಮೈಮೇಲೆ ಸಣ್ಣ ಸಣ್ಣ ಗುಳ್ಳೆ ಮೂಡುವ ಮೂಲಕ ವೈರಸ್ ತನ್ನ ಇರುವಿಕೆ ತೋರಿಸುತ್ತದೆ. ಇದರ ಜೊತೆಗೆ ಮೈಕೈ ನೋವು, ಬೆನ್ನು ನೋವು, ಜ್ವರ ಕಾಣಿಸಿಕೊಳ್ಳುತ್ತದೆ. ಇದು ಯಾರಿಗೆ ಬೇಕಾದರೂ ಬರಬಹುದು. ವಯಸ್ಸಿನ ಮಿತಿ ಇಲ್ಲ.ಪ್ರಸರಣ ಹೇಗೆ?ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಇನ್ನೊಬ್ಬರಿಗೆ ವೈರಸ್ ಹಬ್ಬುತ್ತದೆ. ಇದು ಸಾಂಕ್ರಾಮಿಕ ವೈರಸ್. ನಿರ್ಲಕ್ಷ್ಯ ವಹಿಸಿದರೆ ಸಾವಿಗೂ ಕಾರಣ ಆಗಬಹುದು.