ಸಾರಾಂಶ
ಮಹಿಳೆಯರಿಗೆ ಅರ್ಧದರದಲ್ಲಿ ಟಿಕೆಟ್ ನೀಡುವ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಮಹಾರಾಷ್ಟ್ರದ ಸಾರಿಗೆ ಸಂಸ್ಥೆ ‘ಎಂಎಸ್‌ಆರ್‌ಟಿಸಿ’ ಆರ್ಥಿಕ ಸಂಕಷ್ಟ ಸಿಲುಕಿದೆ ಹಾಗೂ ಸಿಬ್ಬಂದಿಗಳಿಗೆ ಪೂರ್ಣ ವೇತನ ನೀಡಲಾಗದ ಸ್ಥಿತಿಗೆ ಬಂದು ನಿಂತಿದೆ
ಮುಂಬೈ: ಮಹಿಳೆಯರಿಗೆ ಅರ್ಧದರದಲ್ಲಿ ಟಿಕೆಟ್ ನೀಡುವ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಮಹಾರಾಷ್ಟ್ರದ ಸಾರಿಗೆ ಸಂಸ್ಥೆ ‘ಎಂಎಸ್‌ಆರ್‌ಟಿಸಿ’ ಆರ್ಥಿಕ ಸಂಕಷ್ಟ ಸಿಲುಕಿದೆ ಹಾಗೂ ಸಿಬ್ಬಂದಿಗಳಿಗೆ ಪೂರ್ಣ ವೇತನ ನೀಡಲಾಗದ ಸ್ಥಿತಿಗೆ ಬಂದು ನಿಂತಿದೆ. ಏಪ್ರಿಲ್‌ನಲ್ಲಿ ಕೇವಲ ಅರ್ಧದಷ್ಟು ವೇತನವನ್ನು ಮಾತ್ರ ಬಿಡುಗಡೆ ಮಾಡಿದೆ.
ಸರ್ಕಾರದ ಈ ಗ್ಯಾರಂಟಿ ಕ್ರಮದ ಬಗ್ಗೆ ಖುದ್ದು ಸಾರಿಗೆ ಸಚಿವ ಪ್ರತಾಪ್ ಸಾರನಾಯಕ್ ಅವರೇ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಸ್ವಂತ ಸರ್ಕಾರವನ್ನೇ ದೂರಿದ್ದು, ಹಣಕಾಸು ಇಲಾಖೆ ವೇತನಕ್ಕೆ ಮೊತ್ತ ಬಿಡುಗಡೆ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಆದರೆ, ಇದೇ ವೇಳೆ, ‘ಇನ್ನರ್ಧ ವೇತನವನ್ನು ಏ.14ರ ಒಳಗಾಗಿ ಬಿಡುಗಡೆ ಮಾಡಲಾಗುವುದು. ಮುಂದಿನ ತಿಂಗಳಿನಿಂದ ಏ.7ರ ಒಳಗಾಗಿಯೇ ಸಂಬಳ ಜಮೆ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಸರ್ಕಾರದ ನೀತಿಯನ್ನು ವಿಪಕ್ಷ ಶಿವಸೇನೆ (ಉದ್ಧವ್) ಬಣ, ಎನ್‌ಸಿಪಿ (ಶರದ್) ಬಣ ಕಟುವಾಗಿ ಟೀಕಿಸಿವೆ.
ಇತ್ತೀಚೆಗೆ ಆರ್ಥಿಕ ಸಂಕಷ್ಟದ ಕಾರಣ ಮಹಾರಾಷ್ಟ್ರ ಸರ್ಕಾರ ರೈತರ ಸಾಲಮನ್ನಾ ಘೋಷಣೆ ಮಾಡಿರಲಿಲ್ಲ. ಅಲ್ಲದೆ, ಎಲ್ಲ ಮಹಿಳೆಯರಿಗೆ ಮಾಸಾಶನ ನೀಡುವ ಯೋಜನೆಯನ್ನು ಸೀಮಿತಗೊಳಿಸಿ, ಅರ್ಹ ಮಹಿಳೆಯರಿಗೆ ಮಾತ್ರ ನೀಡುವುದಾಗಿ ಘೋಷಿಸಿತ್ತು.
ಗ್ಯಾರಂಟಿ ಸಂಕಷ್ಟ
ಚುನಾವಣಾ ಭರವಸೆಯಂತೆ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ರಿಯಾಯ್ತಿ ನೀಡಿದ್ದ ಎನ್‌ಡಿಎ ಸರ್ಕಾರ
ಇದರಿಂದಾಗಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆ ಆದಾಯದಲ್ಲಿ ಭಾರೀ ಕೊರತೆ. ಸಮಯಕ್ಕೆ ಸರಿಯಾಗಿ ವೇತನ ಪಾವತಿ ಕಷ್ಟ
ಏಪ್ರಿಲ್ ತಿಂಗಳಲ್ಲಿ ನೌಕರರಿಗೆ ಶೇ.50ರಷ್ಟು ಮಾತ್ರವೇ ವೇತನ ಪಾವತಿ ಮಾಡಿದ ಸಾರಿಗೆ ಸಂಸ್ಥೆ, ಉಳಿದ ಶೀಘ್ರ ನೀಡುವ ಭರವಸೆ