ಒಟಿಪಿ ಬಳಸಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಅನ್‌ಲಾಕ್‌ ಅಸಾಧ್ಯ. ಈ ಬಗ್ಗೆ ಆಗುತ್ತಿರುವ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ.

ಮುಂಬೈ: ಒಟಿಪಿ ಬಳಸಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಅನ್‌ಲಾಕ್‌ ಅಸಾಧ್ಯ. ಈ ಬಗ್ಗೆ ಆಗುತ್ತಿರುವ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಯಾವುದೇ ಬಾಹ್ಯ ಸಾಧನದಿಂದ ಇವಿಎಂ ತೆರೆಯುವುದು ಅಸಾಧ್ಯ’ ಎಂದು ಭಾರತೀಯ ಚುನಾವಣಾ ಆಯೋಗ ಹಾಗೂ ಮುಂಬೈ ವಾಯವ್ಯ ಕ್ಷೇತ್ರದ ಚುನಾವಣಾ ಅಧಿಕಾರಿ ವಂದನಾ ಸೂರ್ಯವಂಶಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಈ ಸಂಬಂಧ ವರದಿ ಪ್ರಕಟಿಸಿದ ಮುಂಬೈನ ‘ಮಿಡ್ ಡೇ’ ಪತ್ರಿಕೆಗೆ ಮಾನಹಾನಿ ನೋಟಿಸ್‌ ಜಾರಿ ಮಾಡಿದೆ.

ಏನಿದು ಪ್ರಕರಣ?:

ಮುಂಬೈ ವಾಯವ್ಯ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿ ರವೀಂದ್ರ ವಾಯಿಕರ್‌ ಇತ್ತೀಚೆಗೆ 48 ಮತದಿಂದ ಗೆದ್ದಿದ್ದರು. ಮತ ಎಣಿಕೆ ಕೇಂದ್ರದ ಏಜೆಂಟ್‌ ಆಗಿದ್ದ ಬಂಧು ಮಂಗೇಶ್‌ ಪಂಡಿಲ್ಕರ್‌ ಅವರು, ಎಣಿಕೆ ಕೇಂದ್ರದ ಅಧಿಕಾರಿಯ ಮೊಬೈಲ್‌ ಬಳಸಿ ಒಟಿಪಿ ಪಡೆದು ಇವಿಎಂ ಅನ್‌ಲಾಕ್‌ ಮಾಡಿದ್ದರು. ಇದರ ವಿರುದ್ಧ ಕೇಸು ದಾಖಲಾಗಿದೆ ಎಂದು ಮಿಡ್‌ ಡೇ ಪತ್ರಿಕೆ ವರದಿ ಮಾಡಿತ್ತು.

‘ಇವಿಎಂಗಳನ್ನು ಅನ್‌ಲಾಕ್‌ ಮಾಡಲು ಚುನಾವಣಾ ಅಧಿಕಾರಿಗಳ ಮೊಬೈಲ್‌ ಫೋನ್‌ಗೆ ಒಟಿಪಿ ಬರುತ್ತವೆ. ಹೀಗಾಗಿ ಅಧಿಕಾರಿಗಳು ಮೊಬೈಲ್‌ ಇಟ್ಟುಕೊಳ್ಳಬಹುದು. ವಾಯವ್ಯ ಮುಂಬೈ ಮತ ಎಣಿಕಾ ಕೇಂದ್ರದ ಎಣಿಕೆ ಅಧಿಕಾರಿ ದಿನೇಶ್‌ ಗುರವ್‌ ಬಳಿ ಮೊಬೈಲ್‌ ಇತ್ತು. ಆದರೆ ಗುರವ್‌ ಅವರು ತಮ್ಮ ಫೋನನ್ನು ಅಕ್ರಮವಾಗಿ ಪಂಡಿಲ್ಕರ್‌ಗೆ ನೀಡಿದ್ದರು’ ಎಂದು ವರದಿ ಹೇಳಿತ್ತು.