ಮುಂಬೈನ ಶಾಲೆಯೊಂದು ನರ್ಸರಿ ದಾಖಲಾತಿ ವೇಳೆ ಮಗುವಿನ ಜನನ ವಿಧಾನದ ಬಗ್ಗೆ ಪ್ರಶ್ನೆ ಕೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಶಾಲೆಯ ಕ್ರಮವನ್ನು ಪ್ರಶ್ನಿಸಲಾಗಿದೆ.

ಮುಂಬೈ: ಪುಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಅವುಗಳಿಗೆ ಪರೀಕ್ಷೆ ನಡೆಸುವುದು, ಮಕ್ಕಳ ಪೋಷಕರಿಗೆ ಪರೀಕ್ಷೆ ನಡೆಸುವುದು, ಅವರ ಆರ್ಥಿಕ ಸ್ಥಿತಿಗತಿ ನೋಡುವುದು ಹಳೆಯ ಕಥೆ. ಇದೀಗ ಶಾಲೆಗಳು ಎಲ್ಲಿಗೆ ಬಂದು ನಿಂತಿವೆ ಎಂದರೆ, ಮಗು ಹುಟ್ಟಿದ್ದು ಹೇಗೆ? ಸಾಮಾನ್ಯ ಹೆರಿಗೆಯ ಮೂಲಕವೋ? ಅಥವಾ ಮಗುವಿನ ತಾಯಿಗೆ ಆಪರೇಷನ್‌ ಮಾಡಲಾಗಿತ್ತೋ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲು ಆರಂಭಿಸಿವೆ.

ಮುಂಬೈನ ಶಾಲೆಯೊಂದರಲ್ಲಿ ನರ್ಸರಿ ಮಕ್ಕಳ ದಾಖಲಾತಿ ವೇಳೆ ಫಾರ್ಮ್‌ನಲ್ಲಲಿ ಇಂಥ ಪ್ರಶ್ನೆ ಕೇಳಲಾಗಿದೆ ಎಂದು ಶ್ರೀಧರ್ ವಿ. ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ,‘ ಮುಂಬೈನ ಶಾಲೆಯಲ್ಲಿ ಶಾಲಾ ಶಿಕ್ಷಣದ ಸನ್ನಿವೇಶ ಎಷ್ಟು ಹುಚ್ಚುತನವಾಗಿದೆ ನೋಡಿ’ ಎಂದಿದ್ದಾರೆ. 

ಇದಕ್ಕೆ ನೆಟ್ಟಗರು ತರೇವಾರಿ ಕಾಮೆಂಟ್‌ ಮಾಡಿದ್ದು, ‘ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸುವುದಿಲ್ಲ’ ಎಂದು ಕಾಮೆಂಟ್‌ ಮಾಡಿದ್ದಾರೆ. ಅಲ್ಲದೇ ‘ಹೆರಿಗೆ ವಿಧಾನವನ್ನು ಕೇಳುವುದು ಶಾಲೆಯ ಶಿಕ್ಷಣಕ್ಕೆ ಅಪ್ರಸ್ತುತ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.