ಮುಂಬೈ: ‘ರಂಗೀಲಾ’ ಖ್ಯಾತಿಯ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ ವಿಚ್ಛೇದನಕ್ಕೆ ಅರ್ಜಿ

| Published : Sep 26 2024, 05:54 AM IST / Updated: Sep 26 2024, 05:55 AM IST

Urmila Matondkar

ಸಾರಾಂಶ

ರಂಗೀಲಾ’ ಖ್ಯಾತಿಯ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರು ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈ: ‘ರಂಗೀಲಾ’ ಖ್ಯಾತಿಯ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರು ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಂಟು ವರ್ಷಗಳ ಮದುವೆಯ ನಂತರ ಇವರು ಮುಂಬೈನ ಬಾಂದ್ರಾದಲ್ಲಿ ನಟ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ದೃಢಪಡಿಸಿದೆ. ವಿಚ್ಛೇದನಕ್ಕೆ ಕಾರಣ ಗೊತ್ತಾಗಿಲ್ಲ. ಆದರೆ ಪ್ರತ್ಯೇಕತೆಯು ಪರಸ್ಪರ ಒಪ್ಪಿಗೆಯಿಂದ ಆಗುತ್ತಿಲ್ಲ ಮತ್ತು 4ತಿಂಗಳ ಹಿಂದಯೇ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿಗಳು ಹೇಳಿವೆ.

ಕೇರಳ ಲೈಂಗಿಕ ದೌರ್ಜನ್ಯ: ನಟ ಬಾಬು ಬಂಧನ, ಬಿಡುಗಡೆ

ಕೊಚ್ಚಿ: ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಇಡವೇಲ ಬಾಬು ಅವರನ್ನು ಎಸ್‌ಐಟಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕೇರಳ ಚಿತ್ರರಂಗದ ಸೆಕ್ಸ್‌ ಹಗರಣದಲ್ಲಿ ಇದು 2ನೇ ಬಂಧನವಾಗಿದೆ. ಅದರೆ ಈ ಹಿಂದೆ ಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ಬಾಬು ಬಿಡುಗಡೆಯಾಗಿದ್ದಾರೆ.

ಕೊಚ್ಚಿಯಲ್ಲಿ ಎಸ್‌ಐಟಿ ತಂಡ ಬೆಳಗ್ಗೆ 10 ಗಂಟೆಗೆ ಬಾಬು ಅವರನ್ನು ವಿಚಾರಣೆ ನಡೆಸಿತ್ತು. ನಂತರ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಆತನನ್ನು ಬಂಧಿಸಿತ್ತು.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದಲ್ಲಿ (ಎಎಂಎಂಎ) ಸದಸ್ಯತ್ವಕ್ಕಾಗಿ ನಟಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಚರ್ಚಿಸಲು ಬಾಬು ತನ್ನ ಫ್ಲಾಟ್‌ಗೆ ಆಹ್ವಾನಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿ ಎರ್ನಾಕುಲಂ ಠಾಣೆಯಲ್ಲಿ ದೂರಿದ್ದರು.

ಮುಂದುವರೆದ ರೈಲು ಹಳಿ ತಪ್ಪಿಸುವ ಯತ್ನ

ಛತ್ರಪತಿ ಸಂಭಾಜಿನಗರ/ ಗಾಂಧಿನಗರ: ದೇಶದಲ್ಲಿ ರೈಲು ಹಳಿ ತಪ್ಪಿಸುವ ಯತ್ನಗಳು ಮುಂದುವರಿದಿವೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಮತ್ತು ಗುಜರಾತ್‌ನ ಬೊಟಾದ್‌ನಲ್ಲಿ ಈ ಘಟನೆಗಳು ಮಂಗಳವಾರ ಹಾಗೂ ಬುಧವಾರ ವರದಿಯಾಗಿವೆ.

ಮಹಾರಾಷ್ಟ್ರದ ಲಡ್ಗಾಂವ್ ಶಿವಾರ್ ಬಳಿ ಹಳಿಗಳ ಮೇಲೆ ಸಿಮೆಂಟ್‌ ಸ್ಲಾಬ್‌ ಮತ್ತು ಬಂಡೆಗಳನ್ನು ಸೋಮವಾರ ಮುಂಜಾನೆ ಇರಿಸಲಾಗಿತ್ತು. ಅದೇ ಮಾರ್ಗವಾಗಿ ಔರಂಗಾಬಾದ್‌ನಿಂದ ಜಲ್ನಾಗೆ ಗಂಟೆಗೆ 100 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ನಂದಿಗ್ರಾಮ್‌ ಎಕ್ಸ್‌ಪ್ರೆಸ್‌ ರೈಲಿನ ಚಕ್ರಕ್ಕೆ ಸಿಲುಕಿ ಕೆಲ ಸ್ಲ್ಯಾಬ್‌ ಮತ್ತು ಬಂಡೆಗಳು ಪುಡಿಯಾಗಿವೆ. ಇದನ್ನು ಗಮನಿಸಿದ ಚಾಲಕ ಕೂಡಲೇ ರೈಲನ್ನು ನಿಲ್ಲಿಸಿದ್ದು, ಆಗಲಿದ್ದ ಭಾರೀ ಅನಾಹುವನ್ನು ತಪ್ಪಿದೆ.

ಅತ್ತ ಗುಜರಾತ್‌ನ ಬೊಟಾದ್‌ನಲ್ಲಿ ಹಳಿಗಳ ಮೇಲೆ ಕಬ್ಬಿಣದ ರಾಡ್‌ಗಳನ್ನು ನೇರವಾಗಿ ಇರಿಸಲಾಗಿದ್ದು, ಆ ಮಾರ್ಗವಾಗಿ ಬಂದ ಓಖಾ-ಭಾವನಗರ ಪ್ಯಾಸೆಂಜರ್ ರೈಲು ಅದಕ್ಕೆ ಡಿಕ್ಕಿಯಾಗಿದೆ.

ಕಾಶ್ಮೀರದಲ್ಲಿ ಶಾಂತ ಚುನಾವಣೆ: ಶೇ.56 ಮತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ನಡೆದ 2ನೇ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. 26 ಕ್ಷೇತ್ರಗಳ 3502 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ. 56.05 ರಷ್ಟು ಮತದಾನ ನಡೆದಿದೆ.

ಈ ಬಾರಿ ಕಟ್ರಾದಲ್ಲಿ ಶೇ.79.95 ರಷ್ಟು ಅತಿಹೆಚ್ಚು ಮತದಾನವಾಗಿದ್ದು, ಶ್ರೀನಗರದಲ್ಲಿ ಕೇವಲ 24.83ರಷ್ಟು ಅತೀ ಕಡಿಮೆ ಮತದಾನವಾಗಿದೆ. ಕಾಶ್ಮೀರದ 2ನೇ ಹಂತದ ಚುನಾವಣೆ ವೀಕ್ಷಣೆಗೆ ಅಮೆರಿಕ, ಮೆಕ್ಸಿಕೊ, ಗಯಾನಾ, ದಕ್ಷಿಣ ಕೊರಿಯಾ, ಸೊಮಾಲಿಯಾ, ಪನಾಮ, ಸಿಂಗಾಪುರ, ನೈಜೀರಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ ಸೇರಿದಂತೆ 16 ದೇಶಗಳ ರಾಯಭಾರಿಗಳ ನಿಯೋಗ ಭೇಟಿ ನೀಡಿತು.

ಸೆ.18 ರಂದು ನಡೆದ ಮೊದಲ ಹಂತದಲ್ಲಿ ಶೇ.61.38 ಮತದಾನವಾಗಿತ್ತು. ಆ.1 ರಂದು 40 ಕ್ಷೇತ್ರಗಳಿಗೆ ಇನ್ನೊಂದು ಹಂತದ ಚುನಾವಣೆ ನಡೆಲಿದೆ. ಅ.8ರಂದು ಮತ ಎಣಿಕೆ ನಡೆಯಲಿದೆ.