ಸಾರಾಂಶ
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಐಷಾರಾಮಿ ಮನೆಗಳ ಮಾರಾಟದಲ್ಲಿ ಈ ವರ್ಷವೂ ಭರ್ಜರಿ ಏರಿಕೆ ಕಂಡಿದ್ದು, ಪ್ರಸಕ್ತ ವರ್ಷದ ಮೊದಲ 6 ತಿಂಗಳಲ್ಲಿ 12300 ಕೋಟಿ ರು. ಮೌಲ್ಯದ ಮನೆಗಳು ಮಾರಾಟವಾಗಿದೆ. 10 ಕೋಟಿ ರು. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಮನೆಗಳನ್ನು ಐಷಾರಾಮಿ ಮನೆಗಳೆಂದು ಪರಿಗಣಿಸಲಾಗುತ್ತದೆ.
ವರದಿಯೊಂದ ಪ್ರಕಾರ ಕಳೆದ ವರ್ಷದ ಇದೇ ಅವಧಿಯಲ್ಲಿ 11400 ಕೋಟಿ ರು. ಮೌಲ್ಯದ ಐಷಾರಾಮಿ ಮನೆಗಳು ಮಾರಾಟವಾಗಿದ್ದವು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ.8ರಷ್ಟು ಏರಿಕೆಯಾಗಿದೆ. ಈ ಮನೆ ಖರೀದಿಸಿದವರಲ್ಲಿ 35-55 ವಯಸ್ಸಿನವರೇ ಹೆಚ್ಚು.
ನಾನು ತಪ್ಪು ಮಾಡಿದ್ದೇನೆ: ಕಾರು ಅಪಘಾತದ ತಪ್ಪು ಒಪ್ಪಿಕೊಂಡ ಮಿಹಿರ್ ಶಾ
ಮುಂಬೈ: ಬಿಎಂಡಬ್ಲ್ಯೂ ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಮಿಹಿರ್ ಶಾಗೆ ತಪ್ಪಿನ ಅರಿವಾಗಿದ್ದು ‘ನಾನು ದೊಡ್ಡ ತಪ್ಪು ಮಾಡಿದ್ದೇನೆ, ವೃತ್ತಿ ಜೀವನ ಮುಗಿಯಿತು’ ಎಂದು ಪೊಲೀಸ್ ಅಧಿಕಾರಿಗಳ ಮುಂದೆ ಪಶ್ಚಾತಾಪದ ಮಾತುಗಳನ್ನು ಹೇಳಿದ್ದಾನೆ.
ಅಲ್ಲದೇ ವಿಚಾರಣೆ ವೇಳೆ, ಅಪಘಾತದ ಸಂದರ್ಭದಲ್ಲಿ ತಾನೇ ಕಾರು ಚಲಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಶಿವಸೇನೆ ನಾಯಕನ ಪುತ್ರ ಮದ್ಯ ಸೇವಿಸಿ ನಿರ್ಲಕ್ಷ್ಯದಿಂದ ಓಡಿಸುತ್ತಿದ್ದ ಕಾರು, ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಗುದ್ದಿತ್ತು. ಈ ವೇಳೆ ಸ್ಕೂಟರ್‌ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದರು. ಘಟನೆ ಬಳಿಕ ಮಿಹಿರ್ ಬಳಿಕ ಪರಾರಿಯಾಗಿದ್ದ.
ಉತ್ತರಪ್ರದೇಶ: ಸಿಡಿಲು ಬಡಿದು ಒಂದೇ ದಿನ 38 ನಾಗರಿಕರ ಸಾವು
ಲಖನೌ: ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಸಿಡಿಲಿಗೆ ಒಂದೇ ದಿನ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಪ್ರತಾಪ್‌ಗಢದಲ್ಲಿ 11, ಸುಲ್ತಾನ್‌ಪುರದಲ್ಲಿ 7 , ಚಂದೌಲಿಯಲ್ಲಿ 6, ಮೈನ್‌ಪುರಿಯಲ್ಲಿ 5, ಪ್ರಯಾಗ್‌ರಾಜ್‌ನಲ್ಲಿ 4 , ಔರೈಯಾ , ಡಿಯೋರಿಯಾ, ಹಾಥ್ರಸ್, ವಾರಣಾಸಿ ಮತ್ತು ಸಿದ್ಧಾರ್ಥ್ ನಗರದಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಮೂಲಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಹಲವು ಮಂದಿ ಸಿಡಿಲಿನ ಹೊಡೆತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂರ್ವ ಉತ್ತರ ಪ್ರದೇಶದ ಚಂದೌಲಿಯಲ್ಲಿ ಜಮೀನು ಮತ್ತು ಮೀನುಗಾರಿಕೆ ಕೆಲಸ ಮಾಡುತ್ತಿದ್ದವರಿಗೆ ಸಿಡಿಲು ಬಡಿದಿದೆ. ಇನ್ನು ಸುಲ್ತಾನ್ ಪುರದಲ್ಲಿ ಮೂವರು ಮಕ್ಕಳು, ಮಳೆಗೆ ಮರದಡಿ ಆಶ್ರಯ ಪಡೆಯುತ್ತಿದ್ದ ಮಹಿಳೆ ಕೂಡ ಸಾವನ್ನಪ್ಪಿದ್ದಾರೆ.