ಸಾರಾಂಶ
ನವದೆಹಲಿ: 2008ರ ಮುಂಬೈ ದಾಳಿಯಲ್ಲಿ ತಹಾವುರ್ ರಾಣಾಗಿಂತ, ಡೇವಿಡ್ ಕೋಲ್ಮನ್ ಹೆಡ್ಲಿ ಪಾತ್ರ ಹೆಚ್ಚಿತ್ತಾದರೂ ಭಾರತಕ್ಕೆ ಆತನ ಗಡೀಪಾರು ಮಾಡಲಾಗಿಲ್ಲ. ಇದಕ್ಕೆ ಕಾರಣ ಆತ ಅಮೆರಿಕದ ತನಿಖಾ ಸಂಸ್ಥೆಗಳ ಬಳಿ ಮಾಫಿ ಸಾಕ್ಷಿಯಾಗಿರುವುದು.
ಮುಂಬೈ ದಾಳಿಗೆ ಯೋಜನೆ ರೂಪಿಸುವುದು, ದಾಳಿಯ ಸ್ಥಳ ಆಯ್ಕೆ ಹೀಗೆ ಹಲವು ಪ್ರಮುಖ ರಣತಂತ್ರ ರೂಪಿಸಿದ್ದು ಡೇವಿಡ್ ಹೆಡ್ಲಿ. ಈ ಪ್ರಕರಣದಲ್ಲಿ ಆತ ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿದ್ದ. ಆದರೆ ವಿಚಾರಣೆ ವೇಳೆ ದಾಳಿಯ ಹಿಂದಿನ ಶಕ್ತಿಗಳ ಕುರಿತು ಬಾಯಿಬಿಡಲು ಒಪ್ಪಿದ್ದ. ಈ ಸಂಬಂಧ ಮಾಫಿ ಸಾಕ್ಷಿಯಾಗಲು ಒಪ್ಪಿದ್ದ ಆತ ತನಗೆ ಗಲ್ಲು ಶಿಕ್ಷೆ ವಿಧಿಸಬಾರದು ಎಂದು 2010ರಲ್ಲೇ ಷರತ್ತು ವಿಧಿಸಿದ್ದ. ಅದರಂತೆ ಆತನಿಗೆ ಗಲ್ಲು ಶಿಕ್ಷೆಯಿಂದ, ಭಾರತ, ಡೆನ್ಮಾರ್ಕ್ ಮತ್ತು ಪಾಕಿಸ್ತಾನಕ್ಕೆ ಗಡೀಪಾರು ಮಾಡುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಗಡೀಪಾರು ಮಾಡಿಸುವ ಭಾರತದ ಯತ್ನ ಫಲಕೊಟ್ಟಿಲ್ಲ.
ಸೋರಿಕೆಗೊಂಡಿರುವ ದಾಖಲೆಗಳ ಪ್ರಕಾರ ಮುಂಬೈ ದಾಳಿ ಸಂಚಿನ ಕುರಿತು ಅಮೆರಿಕದ ಗುಪ್ತಚರ ದಳವೂ ಕಣ್ಣಿಟ್ಟಿತ್ತು. ಆದರೆ, ಅದನ್ನು ತಡೆಯುವ ಸಂಬಂಧ ಪೂರ್ವಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತು. ಒಂದು ವೇಳೆ ಹೆಡ್ಲಿಯನ್ನು ಗಡೀಪಾರು ಮಾಡಿದರೆ ಸೂಕ್ಷ್ಮ ಗುಪ್ತಚರ ಮಾಹಿತಿ ಸಂಗ್ರಹ ತಂತ್ರಗಳು ಮತ್ತು ಉಗ್ರ ಹಾಗೂ ಮಾಹಿತಿದಾರನಾಗಿ ಆತನ ದ್ವಿಪಾತ್ರವೂ ಬಯಲಾಗುವ ಅಪಾಯವಿದೆ ಎಂದು ಮೂಲಗಳು ತಿಳಿಸಿವೆ.