ಸಾರಾಂಶ
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಸಾಯಿರಾ ಬಾನು ಅವರ 29 ವರ್ಷದ ವೈವಾಹಿಕ ಜೀವನಕ್ಕೆ ಮಂಗಳವಾರ ತರೆ ಬಿದ್ದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ರೆಹಮಾನ್ ಪತ್ನಿ ಪತ್ನಿ ಸಾಯಿರಾ ಬಾನು ‘ನಾನು ಸಂಗೀತ ಮಾಂತ್ರಿಕರಿಂದ ಬೇರ್ಪಡುತ್ತಿದ್ದೇನೆ. ಇದು ನೋವಿನ ಸಂಗತಿಯಾಗಿದೆ’ ಎಂದಿದ್ದಾರೆ. ಇಬ್ಬರ ನಡುವೆ ಇತ್ತೀಚೆಗೆ ಬಾಂಧವ್ಯ ಸರಿ ಇರಲಿಲ್ಲ ಎನ್ನಲಾಗಿದೆ. 1995ರಲ್ಲಿ ರೆಹಮಾನ್, ಸಾಯಿರಾ ಅರೇಂಜ್ಡ್ ಮ್ಯಾರೇಜ್ ನಡೆದಿತ್ತು.
==ಭಾರತ-ಚೀನಾ ನೇರ ವಿಮಾನ, ಮಾನಸ ಸರೋವರ ಯಾತ್ರೆ ಶೀಘ್ರ ಪುನಾರಂಭ?
ರಿಯೋ ಡಿ ಜನೈರೋ: ಕೋವಿಡ್ ಬಳಿಕ ನಿಂತು ಹೋಗಿದ್ದ ಭಾರತ-ಚೀನಾ ನೇರ ವಿಮಾನ ಸಂಚಾರ ಶೀಘ್ರ ಪುನಾರಂಭ ಆಗುವ ಸಾಧ್ಯತೆ ಇದೆ. ಅಂತೆಯೇ ಮಾನಸ ಸರೋವರ ಯಾತ್ರೆ ಕೂಡ ಶೀಘ್ರ ಪುನಾರಂಭ ಆಗುವ ಸಂಭವವಿದೆ.ಬ್ರೆಜಿಲ್‌ನಲ್ಲಿ ನಡೆದ ಜಿ20 ಶೃಂಗದ ಪಾರ್ಶ್ವದಲ್ಲಿ ಈ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.ಭಾರತ-ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಇತ್ತೀಚೆಗೆ ನಿರ್ಧಾರ ಆಗಿತ್ತು. ಇದಾದ ನಂತರದ ಇನ್ನೊಂದು ಧನಾತ್ಮಕ ಬೆಳವಣಿಗೆ ಇದಾಗಿದೆ.ಭಾರತದಿಂದ ಈಗ ಚೀನಾಗೆ ನೇರ ವಿಮಾನ ಇಲ್ಲ. ಚೀನಾಗೆ ಹೋಗಬೇಕೆಂದರೆ ಅನ್ಯ ದೇಶಗಳ ಮೂಲಕ ಸಾಗಬೇಕು.
==ಆಂಧ್ರ ಸ್ಥಳೀಯ ಚುನಾವಣೆ: 2 ಮಕ್ಕಳ ನಿಯಮ ತೆರವು
ಅಮರಾವತಿ: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸುವವರು 2ಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರಬಾರದು ಎಂಬ ನಿಯಮ ರದ್ದುಪಡಿಸುವ ತಿದ್ದುಪಡಿ ಮಸೂದೆಯನ್ನು ಆಂಧ್ರಪ್ರದೇಶ ವಿಧಾನಸಭೆ ಸೋಮವಾರ ಅಂಗೀಕರಿಸಿದೆ.ವಿಶೇಷವೆಂದರೆ 1994ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರೇ ಇಂಥದ್ದೊಂದು ನಿಯಮ ಜಾರಿಗೆ ತಂದಿದ್ದರು. ಅದರನ್ವಯ 2ಕ್ಕಿಂತ ಹೆಚ್ಚು ಮಕ್ಕಳು ಹೊಂದಿದ್ದದ್ದವರು, ಗ್ರಾಮ, ತಾಲೂಕು, ಜಿಲ್ಲಾ ಪಂಚಾಯ್ತಿಗಳಂತಹ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಿದ್ದರು.ಆದರೆ ಇತ್ತೀಚಿನ ವಿಧಾನಸಭಾ ಚುನಾವಣೆ ವೇಳೆ ಇಂಥ ನಿಯಮ ತೆಗೆದು ಹಾಕುವ ಭರವಸೆಯನ್ನು ನಾಯ್ಡು ನೀಡಿದ್ದರು. ಜೊತೆಗೆ ಆಂಧ್ರ ಪ್ರದೇಶ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಕುಸಿತವಾಗುತ್ತಿರುವ ಬಗ್ಗೆ ಬಹಿರಂಗವಾಗಿ ಆತಂಕ ಹೊರಹಾಕಿದ್ದರು. ಅದರ ಬೆನ್ನಲ್ಲೇ ಇದೀಗ ಹೆಚ್ಚಿನ ಮಕ್ಕಳನ್ನು ಹೊಂದಿದ್ದವರಿಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮಸೂದೆ ಅಂಗೀಕರಿಸಲಾಗಿದೆ.
==ಕೇರಳ ಸೆಕ್ಸ್ ಹಗರಣ: ನಟ ಸಿದ್ದಿಕಿಗೆ ನಿರೀಕ್ಷಣಾ ಜಾಮೀನು
ನವದೆಹಲಿ: ಕೇರಳ ಚಿತ್ರರಂಗದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ಸಿದ್ದಿಕಿಗೆ ಮಂಗಳವಾರ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಸೆ.24 ರಂದು ಕೇರಳ ಹೈಕೋರ್ಟ್ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿದ್ದನ್ನು ಪ್ರಶ್ನಿಸಿ ಸಿದ್ದಿಕಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ಪೀಠವು ಪಾಸ್‌ಪೋರ್ಟ್ ಠೇವಣಿಯಾಗಿ ಇರಿಸಿಕೊಂಡು ಜಾಮೀನು ನೀಡಿದ್ದು, ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿದೆ.‘2016ರಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಆರೋಪಿಸಿ ಇತ್ತೀಚೆಗೆ ಕೇರಳದ ನಟಿಯಬ್ಬರು ಸಿದ್ದಿಕಿ ಅವರ ಮೇಲೆ ದೂರು ನೀಡಿದ್ದರು.
==ಅಸ್ಸಾಂನ ಕರೀಂಗಂಜ್ ಜಿಲ್ಲೆ ಹೆಸರು ಶ್ರೀಭೂಮಿ ಎಂದು ಬದಲು
ಗುವಾಹಟಿ: ಅಸ್ಸಾಂನ ಬರಾಕ್ ಕಣಿವೆಯಲ್ಲಿರುವ ಕರೀಂಗಂಜ್ ಜಿಲ್ಲೆಯ ಹೆಸರನ್ನು ಶ್ರೀಭೂಮಿ ಎಂದು ಬದಲಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತ ನಿರ್ಣಯವನ್ನು ರಾಜ್ಯ ಸಚಿವ ಸಂಪುಟದಲ್ಲಿ ಅಂಗೀಕರಿಸಲಾಗಿದೆ.ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ, ‘ಶತಮಾನದ ಹಿಂದೆ ಕವಿಗುರು ರವೀಂದ್ರನಾಥ ಟ್ಯಾಗೋರರು ಈಗಿನ ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ, ಅರ್ಥಾತ್ ಲಕ್ಷ್ಮೀ ದೇವಿಯ ಭೂಮಿ ಎಂದು ಬಣ್ಣಿಸಿದ್ದರು. ಇಂದು ಜನರ ಬಹುದಿನದ ಬೇಡಿಕೆಯೊಂದು ಈಡೇರಿದೆ. ಈ ಮರುನಾಮಕರಣವು ಜಿಲ್ಲೆಯ ಜನರ ನಿರೀಕ್ಷೆ ಹಾಗೂ ಆಕಾಂಕ್ಷೆಗಳನ್ನು ಬಿಂಬಿಸುತ್ತದೆ’ ಎಂದು ಹೇಳಿದರು.==
ಮಸೀದಿ ಇರುವಲ್ಲಿ ದೇಗುಲ ಶಂಕೆ: ಸಮೀಕ್ಷೆಗೆ ಕೋರ್ಟ್ ಆದೇಶಸಂಭಲ್ (ಉ.ಪ್ರದೇಶ): ಇಲ್ಲಿನ ಮಸೀದಿಯೊಂದು ಹಿಂದೆ ಹಿಂದೂ ದೇವಾಲಯವಾಗಿತ್ತು ಎಂದು ಅರ್ಜಿಯೊಂದು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸಂಭಲ್ ನ್ಯಾಯಾಲಯ ಅದರ ಸಮೀಕ್ಷೆ ನಡೆಸಲು ಆದೇಶ ನೀಡಿದೆ.ಸುಪ್ರೀಂ ಕೋರ್ಟ್‌ನ ವಕೀಲರಾದ ವಿಷ್ಣು ಶಂಕರ್ ಜೈನ್ ಈ ಅರ್ಜಿ ಸಲ್ಲಿಸಿದ್ದು, ‘ಸಂಭಲ್‌ನ ಜಾಮಾ ಮಸೀದಿ ಇರುವ ಜಾಗದಲ್ಲಿ ಹರಿಹರ ದೇವಸ್ಥಾನವಿತ್ತು. ಇದು ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಿತ ಜಾಗವಾಗಿದ್ದು, ಹಿಂದೂ ದೇವಾಲಯದ ಹಲವು ಕುರುಹುಗಳು ಇಲ್ಲಿವೆ. ಈ ಅಂಶಗಳನ್ನು ಗಮನಿಸಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದೊಂದಿಗೆ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ’ ಎಂದು ಹೇಳಿದ್ದಾರೆ.
ಅಂತೆಯೇ, 1529ರಲ್ಲಿ ಮುಘಲ್ ರಾಜ ಬಾಬರ್ ದೇವಸ್ಥಾನವನ್ನು ಭಾಗಶಃ ಧ್ವಂಸಗೊಳಿಸಿದ್ದ ಎಂದು ಅವರು ಹೇಳಿದ್ದಾರೆ.