ಸಾರಾಂಶ
ವಾಷಿಂಗ್ಟನ್: ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವೊಂದೂ ವಲಯವನ್ನು ಬಿಡದೆ ತಮ್ಮ ಟೆಕ್ ಸಾಮ್ರಾಜ್ಯವನ್ನು ಸ್ಥಾಪಿಸುತ್ತಿರುವ ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್, ಅವರು ಇದೀಗ ಎಐ ಬಳಸಿಕೊಂಡು ಮೈಕ್ರೋಸಾಫ್ಟ್ ರೀತಿಯ ಸಾಫ್ಟ್‌ವೇರ್ ಸೃಷ್ಟಿಗೆ ಮುಂದಾಗಿರುವುದಾಗಿ ಘೋಷಿಸಿದ್ದಾರೆ.
‘ಮ್ಯಾಕ್ರೋಹಾರ್ಡ್’ ಹೆಸರಿನ ಈ ಸಾಫ್ಟ್‌ವೇರ್ ಅಭಿವೃದ್ಧಿಗೆ ತಮ್ಮ ಎಐ ಸ್ಟಾರ್ಟ್‌ಅಪ್ ಎಕ್ಸ್‌ಎಐ ಕೆಲಸ ಮಾಡುತ್ತಿದೆ ಎಂದು ಎಕ್ಸ್‌ನಲ್ಲಿ ಮಸ್ಕ್ ಮಾಹಿತಿ ನೀಡಿದ್ದಾರೆ. ‘ಮೈಕ್ರೋಸಾಫ್ಟ್‌ನಂತಹ ಸಾಫ್ಟ್‌ವೇರ್ ಕಂಪನಿಗಳು ಭೌತಿಕ ಹಾರ್ಡ್‌ವೇರ್ ತಯಾರಿಸುವುದಿಲ್ಲವಾದ್ದರಿಂದ, ಅವುಗಳನ್ನು ಸಂಪೂರ್ಣವಾಗಿ ಎಐ ಬಳಸಿ ಅನುಕರಿಸಬಹುದು’ ಎಂದು ಹೇಳಿದ್ದಾರೆ. ಮೈಕ್ರೊಸಾಫ್ಟ್ ರೀತಿ ಮ್ಯಾಕ್ರೋಹಾರ್ಡ್ ಕೋಡಿಂಗ್‌ನಿಂದ ನಿರ್ವಹಣೆಯವರೆಗೆ ಎಲ್ಲಾ ಕೆಲಸಗಳನ್ನು ಮಾಡಬಲ್ಲ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಈ ಸಾಫ್ಟ್‌ವೇರ್, ಮಸ್ಕ್‌ರ ಎಐ ಕಂಪನಿಗಳಾದ ಎಕ್ಸ್‌ಎಐ, ನ್ಯೂರಾಲಿಂಕ್, ಟೆಸ್ಲಾ ಮತ್ತು ಓಪನ್ ಎಐ ಪಟ್ಟಿಗೆ ಸೇರಲಿದೆ.
ಟ್ರೇಡ್‌ಮಾರ್ಕ್‌ಗೆ ಅರ್ಜಿ: ಮ್ಯಾಕ್ರೋಹಾರ್ಡ್‌ನ ನಿರ್ಮಾತೃ ಎಕ್ಸ್‌ಎಐ, ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಕಚೇರಿಯಲ್ಲಿ ಆ.1ರಂದೇ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದೆ. ಇದು, ಮಾನವ ಧ್ವನಿ ಮತ್ತು ಪಠ್ಯದ ಸೃಷ್ಟಿಗೆ ಬಳಕೆಯಾಗುವ ಡೌನ್‌ಲೋಡ್ ಮಾಡಬಹುದಾದ ಸಾಫ್ಟ್‌ವೇರ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ವೀಡಿಯೊ ಗೇಮ್‌ಗಳನ್ನು ವಿನ್ಯಾಸಗೊಳಿಸಲು, ಕೋಡಿಂಗ್ ಮಾಡಲು, ಡೌನ್‌ಲೋಡ್ ಮಾಡಬಹುದಾದ ಸಾಫ್ಟ್‌ವೇರ್‌ಗೆ ಸಂಬಂಧಿಸಿದ್ದಾಗಿದೆ.