ಸಾರಾಂಶ
‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ರ ಪತ್ನಿಯೂ ಆಗಿರುವ ಸಂಸದೆ ಡಿಂಪಲ್ ಯಾದವ್ ಅವರು ಬೆತ್ತಲೆಯಾಗಿ ಮಸೀದಿಗೆ ಹೋಗಿ ಕುಳಿತಿದ್ದರು’ ಎಂದು ಅಖಿಲ ಭಾರತ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಲಖನೌ: ‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ರ ಪತ್ನಿಯೂ ಆಗಿರುವ ಸಂಸದೆ ಡಿಂಪಲ್ ಯಾದವ್ ಅವರು ಬೆತ್ತಲೆಯಾಗಿ ಮಸೀದಿಗೆ ಹೋಗಿ ಕುಳಿತಿದ್ದರು’ ಎಂದು ಅಖಿಲ ಭಾರತ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೀಗಾಗಿ ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜು.26ರಂದು ಮಸೀದಿಗೆ ಹೋಗಿದ್ದ ಡಿಂಪಲ್ ಸೀರೆ ಮಾತ್ರ ಉಟ್ಟಿದ್ದರು. ಬುರ್ಖಾ ಧರಿಸಿರಲಿಲ್ಲ. ಇದರಿಂದಾಗಿ ಅವರ ಬೆನ್ನು ಕೊಂಚ ಕಾಣುತ್ತಿತ್ತು.
ಈ ಬಗ್ಗೆ ಟೀವಿ ಚಾನೆಲ್‌ನಲ್ಲಿ ಮಾತನಾಡಿದ ರಶೀದ್, ‘ಮಸೀದಿಯಲ್ಲಿದ್ದ ಇನ್ನೊಬ್ಬ ಸಂಸದೆ ಇಕ್ರಾ ಹಸನ್ ಅವರು ತಲೆ ಸೇರಿದಂತೆ ಇಡೀ ಮೈ ಮುಚ್ಚುವಂತೆ ಬಟ್ಟೆ ತೊಟ್ಟಿದ್ದರು. ಆದರೆ ಡಿಂಪಲ್ ಬೆತ್ತಲೆಯಾಗಿದ್ದರು’ ಎಂದು ಹೇಳಿದ್ದರು.
ಹೀಗಾಗಿ ರಶೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79(ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಆಡಿದ ಮಾತು, ಸನ್ನೆ ಅಥವಾ ಕೃತ್ಯ), 196(ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 197(ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕರವಾದ ಆರೋಪಗಳು, ಪ್ರತಿಪಾದನೆಗಳು), ಐಟಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.