1ಕ್ಕಿಂತ ಹೆಚ್ಚು ಮದುವೆಗೆ ನೋಂದಣಿ: ಮುಸ್ಲಿಮರಿಗೆ ಕೋರ್ಟ್ ಅಸ್ತು

| Published : Oct 23 2024, 12:30 AM IST

ಸಾರಾಂಶ

ಮುಸ್ಲಿಮರ ವೈಯುಕ್ತಿಕ ಕಾನೂನು ಬಹು ವಿವಾಹಗಳಿಗೆ ಅನುಮತಿ ನೀಡುವುದರಿಂದ ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚಿನ ಮದುವೆಯಾದರೆ ಅದನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

ಮುಂಬೈ: ಮುಸ್ಲಿಮರ ವೈಯುಕ್ತಿಕ ಕಾನೂನು ಬಹು ವಿವಾಹಗಳಿಗೆ ಅನುಮತಿ ನೀಡುವುದರಿಂದ ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚಿನ ಮದುವೆಯಾದರೆ ಅದನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

ವ್ಯಕ್ತಿಯೊಬ್ಬರು ಕಳೆದ ವರ್ಷ ಫೆಬ್ರವರಿಯಲ್ಲಿ ಅಲ್ಜಿರೀಯಾದ ಮಹಿಳೆಯೊಂದಿಗೆ ನಡೆದಿದ್ದ ಮೂರನೇ ವಿವಾಹ ಆಗಿದ್ದರು. ಆದರೆ ಇದು ಪುರುಷನ 3ನೇ ವಿವಾಹ ಎಂದು ಮಹಾನಗರ ಪಾಲಿಕೆ ವಿವಾಹ ನೋಂದಣಾಧಿಕಾರಿಗಳು ನೋಂದಣಿಗೆ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ದಂಪತಿಗಳು ಕೋರ್ಟ್‌ ಮೆಟ್ಟಿಲೇರಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌,‘ಮುಸ್ಲಿಂ ಪುರುಷರು ವೈಯುಕ್ತಿಕ ಕಾನೂನಿನಡಿಯಲ್ಲಿ ಏಕಕಾಲಕ್ಕೆ ನಾಲ್ಕು ಹೆಂಡತಿಯರನ್ನು ಹೊಂದಲು ಅರ್ಹರು. ಮುಸ್ಲಿಂ ಪುರುಷರ ಪ್ರಕರಣದಲ್ಲಿ ಮುಹಾರಾಷ್ಟ್ರ ಮ್ಯಾರೇಜ್ ಬ್ಯೂರೋಗಳ ನಿಯಂತ್ರಣ ಮತ್ತು ಮದುವೆ ನೋಂದಣಿ ಕಾಯ್ದೆಯಡಿಯಲ್ಲಿನ 1 ವಿವಾಹವನ್ನು ಮಾತ್ರ ನೋಂದಾಯಿಸುವ ಕಾನೂನನ್ನು ಒಪ್ಪಿಕೊಳ್ಳುವುದಕ್ಕೆ ಆಗದು ಎಂದಿತು.

==

ಬಹ್ರೈಚ್ ಕೋಮುಗಲಭೆ: ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಉತ್ತರಪ್ರದೇಶದ ಬಹ್ರೈಚ್‌ನ ಕೋಮುಗಲಭೆಯಲ್ಲಿ ಭಾಗಿಯಾದವರ ಮನೆಗಳನ್ನು ‘ಅಕ್ರಮ ಕಟ್ಟಡಗಳು’ ಎಂಬ ಕಾರಣ ನೀಡಿ ಬುಲ್ಡೋಜರ್‌ನಿಂದ ಧ್ವಂಸಗೊಳಿಸುವ ಯೋಗಿ ಆದಿತ್ಯನಾಥ್ ಸರ್ಕಾರದ ಕ್ರಮಕ್ಕೆ ಸೋಮವಾರ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.‘ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸುವ ಅಪಾಯವನ್ನು ಎದುರಿಸಲು ಬಯಸಿದರೆ ಅದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು (ಯುವರ್‌ ಚಾಯ್ಸ್)’ ಎಂದು ಕೋರ್ಟ್‌ ಹೇಳಿದೆ ಹಾಗೂ ಬುಧವಾರ ಮತ್ತೆ ವಿಚಾರಣೆ ನಡೆಸುವುದಾಗಿ ಹೇಳಿದೆ.

ಇತ್ತೀಚೆಗೆ ಬಹ್ರೈಚ್‌ನಲ್ಲಿ ದುರ್ಗಾ ಮೆರವಣಿಗೆ ವೇಳೆ ಕೋಮುಗಲಭೆ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣರಾದವರ ಮನೆಯ ಅಕ್ರಮ ಭಾಗಗಳನ್ನು ಧ್ವಂಸಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಕೆಲವರು ಸುಪ್ರಿಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.