ಸಾರಾಂಶ
ನವದೆಹಲಿ: ಅಯೋಧ್ಯೆಯ ರಾಮಮಂದಿರಕ್ಕೆ ಬಾಲರಾಮನ ವಿಗ್ರಹ ಕೆತ್ತಿಕೊಟ್ಟ ಮೈಸೂರಿನ ಅರುಣ್ ಯೋಗಿರಾಜ್, ಇದೀಗ ಖ್ಯಾತ ನಟ ರಣಬೀರ್ ಕಪೂರ್, ಅಲಿಯಾ ಭಟ್ ಅವರ ಹೊಸ ಮನೆಗೆ ಸುಂದರ ಗಣಪತಿ ವಿಗ್ರಹ ಕೆತ್ತಿಕೊಟ್ಟಿದ್ದಾರೆ. ಅ.17ರಂದು ಗೃಹಪ್ರವೇಶ ನಡೆಯಲಿರುವ ಮನೆಗೆ ಅರುಣ್, 4 ಅಡಿ ಎತ್ತರದ ಹೊಯ್ಸಳ, ಮೈಸೂರು ಶೈಲಿಯ ವಿಗ್ರಹ ಕೆತ್ತಿಕೊಟ್ಟಿದ್ದರೆ. ವಿಗ್ರಹ 3 ಅಡಿ ಪೀಠದ ಮೇಲೆ ಆಸೀನವಾಗಿದೆ. ತಾರಾ ದಂಪತಿ ಮುಂಬೈನಲ್ಲಿ ನಿರ್ಮಿಸಿರುವ ಐಷಾರಾಮಿ ಮನೆ 6 ಅಂತಸ್ತು ಹೊಂದಿದ್ದು, 250 ಕೋಟಿ ರು. ವೆಚ್ಚ ಮಾಡಲಾಗಿದೆ. ಮನೆಗೆ ರಣಬೀರ್ ಕಪೂರ್ ಅವರ ಅಜ್ಜ- ಅಜ್ಜಿ ರಾಜ್ ಕಪೂರ್ ಮತ್ತು ಕೃಷ್ಣಾ ರಾಜ್ ಕಪೂರ್ ಅವರ ನೆನಪಿನಲ್ಲಿ ಕೃಷ್ಣಾ ರಾಜ್ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ.
ಇಂದು ಗುಜರಾತ್ ಸಂಪುಟ ಪುನಾರಚನೆ: ಸಿಎಂಗೆ ಎಲ್ಲಾ 16 ಸಚಿವರ ರಾಜೀನಾಮೆ ಸಲ್ಲಿಕೆ
ಗಾಂಧಿನಗರ: ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿರುವ ಗುಜರಾತ್‌ನಲ್ಲಿ, ರಾಜ್ಯದ ಬಿಜೆಪಿ ಸರ್ಕಾರ ಸಂಪುಟ ಪುನಾರಚನೆ ಮೂಲಕ ಇಮೇಜ್ ಬದಲಾವಣೆಗೆ ಮುಂದಾಗಿದೆ. ಶುಕ್ರವಾರ ಬೆಳಗ್ಗೆ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಚಿವ ಸಂಪುಟದ ಎಲ್ಲಾ 16 ಸಚಿವರು ಗುರುವಾರ ಸಿಎಂಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟ ಪುನಾರಚನೆ ವೇಳೆ ಅವಕಾಶ ಲಭ್ಯವಿರುವ 27 ಜನರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಎನ್ನಲಾಗಿದೆ.
60 ಕೋಟಿ ಕಟ್ಟಿ ಎಂದಿದ್ದಕ್ಕೆ ವಿದೇಶ ಪ್ರವಾಸವೇ ಬೇಡ ಎಂದು ಕೈಬಿಟ್ಟ ಶಿಲ್ಪಾ ಶೆಟ್ಟಿ
ಮುಂಬೈ: ವಿದೇಶಕ್ಕೆ ತೆರಳಬೇಕಾದಲ್ಲಿ 60 ಕೋಟಿ ರು. ಹಣ ಕಟ್ಟಿ ಎಂಬ ಬಾಂಬೆ ಹೈಕೋರ್ಟ್ ಆದೇಶಕ್ಕೆ ಬೆಚ್ಚಿಬಿದ್ದಿರುವ ನಟಿ ಶಿಲ್ಪಾ ಶೆಟ್ಟಿ, ಸದ್ಯ ವಿದೇಶ ಪ್ರವಾಸ ಹೋಗಲ್ಲ. ವಿದೇಶ ಪ್ರವಾಸದ ಯೋಜನೆ ಯಾಕೋ ಸರಿಹೊಂದಿಬರಲಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಶಿಲ್ಪಾ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರು. ವಂಚನೆ ಆರೋಪ ಕೇಳಿಬಂದಿದೆ. ಇದೇ ವೇಳೆ ನಟಿ, ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಕೋರ್ಟ್, ಹೋಗುವುದಿದ್ದರೆ 60 ಕೋಟಿ ಹಣ ಭದ್ರತೆಯಾಗಿ ಇಡಿ ಎಂದಿತ್ತು.
ಬಿಹಾರ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗಿಂದು ಕೊನೆ ದಿನ
ಪಟನಾ: ಬಿಹಾರದಲ್ಲಿ ನ.6ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ. ರಾಜ್ಯದ ಒಟ್ಟು 243 ಕ್ಷೇತ್ರಗಳ ಪೈಕಿ 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.ಈಗಾಗಲೇ ಉಪಮುಖ್ಯಮಂತ್ರಿಯಾಗಿರುವ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, ಜನಶಕ್ತಿ ಜನತಾದಳದ ತೇಜ್ ಪ್ರತಾಪ್ ಯಾದವ್ ಸೇರಿ ಅನೇಕರು ನಾಮಪತ್ರ ಸಲ್ಲಿಸಿದ್ದಾರೆ.
ಎರಡನೇ ಹಂತದ ಚುನಾವಣೆ ನ.11ರಂದು ನಡೆಯಲಿದ್ದು, ನ.14ರಂದು ಫಲಿತಾಂಶ ಘೋಷಣೆಯಾಗಲಿದೆ.
ಯೆಮನ್‌ನಲ್ಲಿ ನಿಮಿಷಾ ಗಲ್ಲಿಗೆ ತಡೆ: ಸುಪ್ರೀಂಗೆ ಕೇಂದ್ರದ ಮಾಹಿತಿ
ನವದೆಹಲಿ: ಯೆಮನ್ ಪ್ರಜೆಯ ಕೊಲೆ ಕೇಸ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರ ಶಿಕ್ಷೆಗೆ ತಡೆ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕೂಲ ಘಟನೆಗಳು ನಡೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಕೇಂದ್ರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಈ ವಿಚಾರದಲ್ಲಿ ಹೊಸ ಮಧ್ಯವರ್ತಿಯ ಪ್ರವೇಶವಾಗಿದೆ ಎನ್ನುವ ವಿಚಾರವನ್ನು ಸುಪ್ರೀಂ ಗಮನಕ್ಕೆ ತಂದರು. ಬಳಿಕ ಪೀಠ ‘2026ರ ಜನವರಿಗೆ ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಅಗತ್ಯವಿದ್ದರೆ ಮುಂಚಿತವಾಗಿಯೇ ವಿಚಾರ ನಡೆಸುವುದಾಗಿ’ ತಿಳಿಸಿತು. ಕಳೆದ ಜು.16ರಂದು ನಿಮಿಷಾಗೆ ಮರಣದಂಡನೆ ನಿಗದಿಯಾಗಿತ್ತು. ಬಳಿಕ ತಡೆ ನೀಡಲಾಗಿತ್ತು.
ಕೆನಡಾದಲ್ಲಿ ಕಪಿಲ್ ಕೆಫೆಗೆ ಮೇಲೆ ಮತ್ತೆ ಗುಂಡೇಟು
ನವದೆಹಲಿ: ಕೆನಡಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆಯಲ್ಲಿ ಬುಧವಾರ ತಡರಾತ್ರಿ ಮತ್ತೆ ಗುಂಡಿನ ದಾಳಿ ನಡೆದಿದೆ. ಇದು ಜುಲೈನಲ್ಲಿ ಕೆಫೆ ಆರಂಭವಾದ ಬಳಿಕ ನಡೆದ ಮೂರನೇ ದಾಳಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಲಾರೆನ್ಸ್ ಬಿಷ್ಣೋಯಿ ಸಹಚರರಾಗಿರುವ ಗೋಲ್ಡಿ ಧಿಲ್ಲೋಮ್ ಮತ್ತು ಕುಲದೀಪ್ ಸಿಧು ಸಾಮಾಜಿಕ ಜಾಲತಾಣದಲ್ಲಿ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.