ಸಾರಾಂಶ
ನಾಗಮಂಗಲ : ಗಲಭೆ ಪೀಡಿತ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಘಟನೆಯಲ್ಲಿ ಹಾನಿಗೊಳಗಾದ ಸಂತ್ರಸ್ತರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ ವಿಜಯೇಂದ್ರ, ಗಣೇಶ ಮೂರ್ತಿ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು, ಗಾಜಿನ ಬಾಟಲ್ ತೂರಿ ಪೆಟ್ರೋಲ್ ಬಾಂಬ್ ಎಸೆದಿರುವುದು, ತಲವಾರ್‌ಗಳನ್ನು ತಂದು ರಸ್ತೆಯಲ್ಲಿ ಹಲ್ಲೆ ನಡೆಸಲು ಯತ್ನ ನಡೆಸಿರುವುದು ದೇಶದ್ರೋಹಿಗಳ ಪೂರ್ವನಿಯೋಜಿತ ಕೃತ್ಯ. ಇಷ್ಟಾದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಮೂಕ ಪ್ರೇಕ್ಷಕರಾಗಿ ಎಲ್ಲವನ್ನೂ ನೋಡುತ್ತಿದ್ದಾರೆಂದರೆ ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಈ ಹಿಂದೆ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸುವ ಕೆಲಸ ಮಾಡಿದರು. ರಾಜ್ಯದಲ್ಲಿರುವ ಹಿಂದೂ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡವಳಿಕೆಯ ಪರಿಣಾಮವಾಗಿ ದೇಶದ್ರೋಹಿಗಳು ಇಂತಹ ಅಟ್ಟಹಾಸಕ್ಕೆ ಕೈ ಹಾಕುತ್ತಿದ್ದಾರೆ. ರೈತರ ಹೋರಾಟಕ್ಕೆ ದೇಶಾದ್ಯಂತ ಹೆಸರಾಗಿರುವ ಮಂಡ್ಯ ಜಿಲ್ಲೆ ಕೋಮುಗಲಭೆ ವಿಚಾರದಲ್ಲಿ ರಾಷ್ಟ್ರದೆಲ್ಲೆಡೆ ಚರ್ಚೆಯಾಗುತ್ತಿರುವುದು ದುರಾದೃಷ್ಟ. ಗಲಭೆಯಲ್ಲಿ ನಷ್ಟವಾಗಿರುವ ಆಸ್ತಿ ಪಾಸ್ತಿಗಳ ಸಂಪೂರ್ಣ ವೆಚ್ಚದ ಪರಿಹಾರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭರಿಸಿಕೊಡಬೇಕೆಂದು ಆಗ್ರಹಿಸಿದರು.
ಲಾಂಗ್ ಮಚ್ಚು ಹಿಡಿದು ಇಂದು ರಸ್ತೆಯಲ್ಲಿ ಓಡಾಡಿರುವ ಕಿಡಿಗೇಡಿಗಳು ಕಾಂಗ್ರೆಸ್ ಪಕ್ಷದ ಶಾಸಕರ ಮಂತ್ರಿಗಳ ಮನೆಗಳಿಗೂ ನುಗ್ಗುವ ಕಾಲ ದೂರವಿಲ್ಲ. ನಿಮ್ಮ 420 ರಾಜಕಾರಣ ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡಿರುವ ದೇಶದ್ರೋಹಿಗಳನ್ನು ಮಟ್ಟಹಾಕಬೇಕು. ವಶಕ್ಕೆ ಪಡೆದಿರುವ ಹಿಂದೂ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಹನುಮನನ್ನು ವಿಲನ್ ಮಾಡಿ ಆಗಿದೆ. ಇದೀಗ ಗಣೇಶನ ಕಂಡರೂ ಅವರಿಗೆ ಆಗುತ್ತಿಲ್ಲ. ಗಣೇಶನ ಮೇಲೂ ವಕ್ರದೃಷ್ಟಿ ಬೀರಿದೆ ಇದರಿಂದ ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ ಎಂದು ಟೀಕಿಸಿದರು.
ಕೆರಗೋಡಿನಲ್ಲಿ ಏಕಾಏಕಿ ಹನುಮ ಧ್ವಜ ಇಳಿಸಿದರು. ಬಳಿಕ ರಾಜ್ಯ ಪೂರ್ತಿ ಹನುಮ ಧ್ವಜ ಇಳಿಸಿದರು. ಈಗ ಗಣೇಶನನ್ನು ಟಾರ್ಗೆಟ್ ಮಾಡಿಕೊಂಡು ಗಲಭೆ ಸೃಷ್ಟಿಸಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮಚ್ಚು ಲಾಂಗ್ ಹಿಡಿದುಕೊಂಡು ಶಿವಮೊಗ್ಗದಲ್ಲಿ ಓಡಾಡಿದವರಿಗೇ ಏನೂ ಮಾಡಲಿಲ್ಲ. ಇದೆಲ್ಲ ಕಾಂಗ್ರೆಸ್ಸಿನ ಪ್ರಚೋದನೆ ಇಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಕಳೆದ ಬಾರಿಯೂ ಗಣಪತಿ ವಿಚಾರಕ್ಕೆ ಪಟ್ಟಣದಲ್ಲಿ ಗಲಾಟೆಯಾಗಿದೆ. ಅಧಿಕಾರಿಗಳಿಗೆ, ಪೊಲೀಸರಿಗೆ ಅಷ್ಟೂ ಪರಿಜ್ಞಾನವಿಲ್ಲವೇ. ಏನ್ ಕತ್ತೆ ಕಾಯ್ತಿದ್ರಾ ಪೊಲೀಸರು ಎಂದು ಖಾರವಾಗಿ ಪ್ರಶ್ನಿಸಿದರು. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಈ ಕೃತ್ಯವನ್ನು ಸಣ್ಣ ಘಟನೆ ಎಂದಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿರೋದು ಅವರಿಗೆ ಸಣ್ಣ ಘಟನೆ. ಮಿಸೆಲ್, ರಾಕೆಟ್ ಹಾಕಿದರಷ್ಟೇ ಅವರಿಗೆ ದೊಡ್ಡ ಘಟನೆ. ಇದು ಪೂರ್ವ ನಿಯೋಜಿತ ಕೃತ್ಯ. ಮಸೀದಿಯಲ್ಲಿ ಪ್ಲಾನ್ ಮಾಡಿ ಗಲಭೆ ಸೃಷ್ಟಿಸಿದ್ದಾರೆ. ಮಂಡ್ಯದಲ್ಲಿ ಗಣಪತಿ ಹಬ್ಬ ನಡೆಯಬಾರದು ಎನ್ನುವುದೇ ಅವರ ಪ್ಲಾನ್. ಅದಕ್ಕಾಗಿ ಕುತಂತ್ರ ಮಾಡಿ ಈ ಕೃತ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಂಸದ ಪ್ರತಾಪ್‌ಸಿಂಹ, ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿದರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಇದ್ದರು.
==ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಶೇ.90ರಷ್ಟು ಹಿಂದೂಗಳೇ ಇರುವ ನಾಗಮಂಗಲದಲ್ಲಿ ಇಂತಹ ಸಂಕಷ್ಟ ಬರುತ್ತೆ ಎಂದರೆ ನಾವು ಎಲ್ಲಿದ್ದೇವೆಂಬ ಪ್ರಶ್ನೆ ಉದ್ಭವಗಾಗುತ್ತದೆ. ಪೆಟ್ರೋಲ್ ಬಾಂಬ್ ಹಾಕಿ ಅಂಗಡಿಗಳನ್ನು ಸುಟ್ಟು ಕೋಟ್ಯಂತರ ನಷ್ಟ ಮಾಡುವುದು, ಗಣಪತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರುವುದು ಸಣ್ಣ ಘಟನೆಯೇ, ಕಾಂಗ್ರೆಸ್ ಸರ್ಕಾರ ಮತಾಂಧರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿರುವುದರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.