ಉತ್ತರಾಖಂಡದಲ್ಲಿ ಕಾಡ್ಗಿಚ್ಚು ವ್ಯಾಪಿಸಿಕೊಂಡ ಪರಿಣಾಮ 4 ಹೆಕ್ಟೇರ್‌ ಕಾಡು ನಾಶವಾಗಿ ವಾಯುನೆಲೆ ಹಾಗೂ ಹೈಕೋರ್ಟ್‌ ಕಾಲೋನಿಗೂ ವ್ಯಾಪಿಸಿದ್ದು, ನೈನಿ ನದಿಯಲ್ಲಿ ಪರಿಸ್ಥಿತಿ ಹತೋಟಿಗೆ ಬರುವವರೆಗೆ ಜಲವಿಹಾರ ಬಂದ್‌ ಮಾಡಲಾಗಿದೆ.

ಡೆಹ್ರಾಡೂನ್‌: ಉತ್ತರಾಖಂಡದ ನೈನಿತಾಲ್‌ ಬಳಿ ಕಾಡ್ಗಿಚ್ಚು ವ್ಯಾಪಿಸಿಕೊಂಡಿದೆ. ವಾಯುಪಡೆ ನೆಲೆ ಹಾಗೂ ಹೈಕೋರ್ಟ್‌ ಕಾಲೋನಿಯವರೆಗೂ ಕಾಡ್ಗಿಚ್ಚು ವ್ಯಾಪಿಸಿದ್ದು, ಇದನ್ನು ನಂದಿಸಲು ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಉತ್ತರಾಖಂಡದಲ್ಲಿ ನೈನಿತಾಲ್‌ ಸೇರಿ 26 ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗಿದ್ದು, ಸುಮಾರು 33.34 ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ.

ಶುಕ್ರವಾರದಿಂದ ಪ್ರಾರಂಭವಾದ ಕಾಡ್ಗಿಚ್ಚಿನಿಂದ ಪೈನ್ಸ್‌ ಪ್ರದೇಶದ ಹೈಕೋರ್ಟ್‌ ಕಾಲೋನಿಗೂ ಹಾನಿಯಾಗಿದ್ದು, ಖಾಲಿ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ. ಇದರ ನಿಗ್ರಹಕ್ಕೆ ಉತ್ತರಾಖಂಡ ಸಕಲ ಕ್ರಮಗಳನ್ನು ಕೈಗೊಂಡಿದೆ.

ಅರಣ್ಯ ಇಲಾಖೆಗೆ ಸೇನೆಯೂ ಕೈಜೋಡಿಸಿದೆ. ಭಾರತೀಯ ವಾಯುಸೇನೆಗೆ ಸೇರಿದ ಎಂಐ-17 ಹೆಲಿಕಾಪ್ಟರ್‌ ಸಮೀಪದಲ್ಲೇ ಇರುವ ಕೆರೆಯೊಂದರಿಂದ ನೀರು ತುಂಬಿಕೊಂಡು ಕಾಡ್ಗಿಚ್ಚು ವ್ಯಾಪಿಸಿರುವ ಪೈನ್ಸ್‌, ಭೂಮಿಯಾಧರ್‌, ಜ್ಯೋಲಿಕೋಟ್‌, ನಾರಾಯಣ ನಗರ, ಭವಾಲಿ, ರಾಮ್‌ಘರ್‌ ಮತ್ತು ಮುಕ್ತೇಶ್ವರ ಪ್ರದೇಶಗಳಲ್ಲಿ ನೀರು ಸಿಂಪಡಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ.

ಈ ನಡುವೆ ಮುಖ್ಯಮಂತ್ರಿ ಡೆಹ್ರಾಡೂನ್‌ ಮತ್ತು ಹಲ್ದ್ವಾನಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ನಿರ್ದೇಶನಗಳನ್ನು ನೀಡಿದ್ದಾರೆ.

ಮೂವರ ಬಂಧನ:

ಕಾಡಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾದ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದೆ. ಅಲ್ಲದೆ ನೈನಿ ನದಿಯಲ್ಲಿ ಪರಿಸ್ಥಿತಿ ಹತೋಟಿಗೆ ಬರುವವರೆಗೆ ದೋಣಿವಿಹಾರವನ್ನು ನಿಷೇಧಿಸಲಾಗಿದೆ.