ಮೋದಿ ಅವಧಿಯಲ್ಲಿ ರೈತರಿಗೆ 3 ಪಟ್ಟು ಅಧಿಕ ಸಾಲ ವಿತರಣೆ

| Published : Feb 23 2024, 01:54 AM IST / Updated: Feb 23 2024, 07:58 AM IST

ಸಾರಾಂಶ

ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳ ಅವಧಿಯಲ್ಲಿ ರೈತರಿಗೆ ವಿತರಣೆ ಮಾಡಿರುವ ಕೃಷಿ ಸಾಲದ ಪ್ರಮಾಣ 20.39 ಲಕ್ಷ ಕೋಟಿ ರು. ತಲುಪಿದೆ. ಉಳಿದ 2 ತಿಂಗಳ ಅವಧಿಯದ್ದೂ ಸೇರಿದರೆ ಒಟ್ಟಾರೆ ಸಾಲ ವಿತರಣೆ 22 ಲಕ್ಷ ಕೋಟಿ ರು. ದಾಟಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳ ಅವಧಿಯಲ್ಲಿ ರೈತರಿಗೆ ವಿತರಣೆ ಮಾಡಿರುವ ಕೃಷಿ ಸಾಲದ ಪ್ರಮಾಣ 20.39 ಲಕ್ಷ ಕೋಟಿ ರು. ತಲುಪಿದೆ. ಉಳಿದ 2 ತಿಂಗಳ ಅವಧಿಯದ್ದೂ ಸೇರಿದರೆ ಒಟ್ಟಾರೆ ಸಾಲ ವಿತರಣೆ 22 ಲಕ್ಷ ಕೋಟಿ ರು. ದಾಟಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. 

ಇದು 2013-14ರಲ್ಲಿ ಮೋದಿ ಪ್ರಧಾನಿಯಾದ ವರ್ಷಕ್ಕೆ ಹೋಲಿಸಿದರೆ 3 ಪಟ್ಟು ಹೆಚ್ಚು ಎಂಬುದು ಗಮನಾರ್ಹ

ಕಳೆದ ವರ್ಷದ ಬಜೆಟ್‌ನಲ್ಲಿ 2023-24ನೇ ಸಾಲಿನಲ್ಲಿ ಒಟ್ಟಾರೆ 20 ಲಕ್ಷ ಕೋಟಿ ರು. ಕೃಷಿ ಸಾಲ ವಿತರಣೆಯ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು. 

ಆದರೆ ಹಣಕಾಸು ವರ್ಷದ 10 ತಿಂಗಳಲ್ಲೇ ಸರ್ಕಾರ ಈ ಗುರಿಯನ್ನು ಮೀರಿ 20.39 ಲಕ್ಷ ಕೋಟಿ ರು. ಸಾಲ ವಿತರಣೆ ಮಾಡಿದೆ. ಉಳಿದ 2 ತಿಂಗಳಲ್ಲಿ ಇನ್ನೂ 1.70 ಲಕ್ಷ ಕೋಟಿ ರು. ಸಾಲ ವಿತರಣೆಯ ನಿರೀಕ್ಷೆ ಇದೆ ಎನ್ನಲಾಗಿದೆ.

3 ಪಟ್ಟು ಹೆಚ್ಚಳ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2013-14ರಲ್ಲಿ ಅಧಿಕಾರಕ್ಕೆ ಬಂದಾಗ ಕೃಷಿ ವಲಯಕ್ಕೆ ನೀಡುತ್ತಿದ್ದ ಸಾಲದ ಪ್ರಮಾಣ 7.3 ಲಕ್ಷ ಕೋಟಿ ರು.ನಷ್ಟಿತ್ತು. ಈ ವರ್ಷ ಅದು 22 ಲಕ್ಷ ಕೋಟಿ ರು. ತಲುಪಲಿದೆ. ಹೀಗಾಗಿ ಸಾಲ ವಿತರಣೆ 3 ಪಟ್ಟು ಹೆಚ್ಚಳವಾದಂತೆ ಆಗಲಿದೆ.

ಅಗ್ಗದ ಬಡ್ಡಿಯಲ್ಲಿ ಸಾಲ: ರೈತರಿಗೆ ಸುಲಭವಾಗಿ ಅಗ್ಗದ ದರದಲ್ಲಿ ಸಾಲ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಶೇ.7ರಷ್ಟು ಬಡ್ಡಿದರದಲ್ಲಿ ಸಾಲ ವಿತರಣೆ ಮಾಡುತ್ತದೆ. ಜೊತೆಗೆ ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಬಡ್ಡಿ ರಿಯಾಯ್ತಿಯೂ ಸಿಗುತ್ತದೆ.