ರಹಸ್ಯವಾಗಿ ಪ್ರೇಮಿ ಬೇಗ್‌ ಜತೆ ಅಮೆರಿಕ ಮೂಲದ ಬಾಲಿವುಡ್ ನಟಿ ನರ್ಗಿಸ್‌ ಫಕ್ರಿ ವಿವಾಹ

| N/A | Published : Feb 23 2025, 12:34 AM IST / Updated: Feb 23 2025, 04:52 AM IST

Nargis Fakhri

ಸಾರಾಂಶ

ಅಮೆರಿಕ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ತಮ್ಮ ದೀರ್ಘಕಾಲದ ಸಂಗಾತಿ, ಅಮೆರಿಕದ ಉದ್ಯಮಿ ಟೋನಿ ಬೇಗ್‌ ಅವರನ್ನು ಲಾಸ್ ಏಂಜಲೀಸ್‌ನಲ್ಲಿ ರಹಸ್ಯವಾಗಿ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ: ಅಮೆರಿಕ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ತಮ್ಮ ದೀರ್ಘಕಾಲದ ಸಂಗಾತಿ, ಅಮೆರಿಕದ ಉದ್ಯಮಿ ಟೋನಿ ಬೇಗ್‌ ಅವರನ್ನು ಲಾಸ್ ಏಂಜಲೀಸ್‌ನಲ್ಲಿ ರಹಸ್ಯವಾಗಿ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.  

ಕುಟುಂಬದ ಆಪ್ತರು ಮತ್ತು ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗವಹಿಸಿದ್ದು, ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಮದುವೆಯನ್ನು ಗೌಪ್ಯವಾಗಿಡುವ ಉದ್ದೇಶದಿಂದ ದಂಪತಿ ಯಾವುದೇ ಫೋಟೊಗಳು ಬಹಿರಂಗವಾಗದಂತೆ ಎಚ್ಚರ ವಹಿಸಿದ್ದರು ಎಂದು ತಿಳಿದುಬಂದಿದೆ. ನರ್ಗಿಸ್ ಮತ್ತು ಟೋನಿ 3 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಈಗ ಸ್ವಿಜರ್ಲೆಂಡ್‌ಗೆ ಮಧುಚಂದ್ರಕ್ಕೆ ತೆರಳಿದ್ದಾರೆ.

ಗುಜರಾತ್‌ ಸಾಲ ರು. 3.77 ಲಕ್ಷ ಕೋಟಿ: ಪ್ರತಿ ವ್ಯಕ್ತಿ ಮೇಲೆ ರು. 66,000 ಹೊರೆ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಸಾರ್ವಜನಿಕ ಸಾಲದ ಮತ್ತವು 2023-24ನೇ ಸಾಲಿಗೆ 3,77,962 ಕೋಟಿ ರು.ಗೆ ಏರಿಕೆಯಾಗಿದ್ದು, ಇದು ಪ್ರತಿ ವ್ಯಕ್ತಿ ಮೇಲೆ 66,000 ರು. ಹೊರೆಯಾಗಿದೆ.

ಗುಜರಾತ್‌ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ ಅಂಕಿ ಅಂಶದಲ್ಲಿ ಮಾಹಿತಿ ಬೆಳಕಿಗೆ ಬಂದಿದೆ. ಸಾಲದ ಮೊತ್ತವು 2024-25ನೇ ಸಾಲಿಗೆ 3,99,633 ಕೋಟಿ ರು.ಗೆ ಹೆಚ್ಚಳವಾಗಲಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸರ್ಕಾರ, 2022-23ರಲ್ಲಿ ರಾಜ್ಯ ಸರ್ಕಾರವು 23,442 ಕೋಟಿ ರು. ಬಡ್ಡಿ ಪಾವತಿಸಿದ್ದು, 22,159 ಕೋಟಿ ರು. ಅಸಲು ಪಾವತಿಸಿದೆ. 2023-24ರಲ್ಲಿ 25,212 ಕೋಟಿ ರು. ಬಡ್ಡಿ ಮತ್ತು 26,149 ಕೋಟಿ ರು. ಅಸಲು ಪಾವತಿ ಮಾಡಲಿದೆ ಎಂದು ತಿಳಿಸಿದೆ.

ಗುಜರಾತ್‌ನ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕ ಅಮಿತ್‌ ಚಾವಡಾ, ಬಿಜೆಪಿಯು ಸಾಲ ಮಾಡಿ ತುಪ್ಪ ತಿನ್ನುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ 2027-28ರ ವೇಳೆಗೆ ಸರ್ಕಾರದ ಅಂದಾಜಿನ ಪ್ರಕಾರವೇ ಸಾಲದ ಮೊತ್ತವು 5.78 ಲಕ್ಷ ಕೋಟಿ ರು.ಗೆ ಏರಿಕೆಯಾಗಲಿದೆ. ಆಗ ನವಜಾತ ಶಿಶು ಮೇಲೆ ಮೇಲೆ 89,000 ರು. ಹೊರೆ ಬೀಳಲಿದೆ ಎಂದು ಕಿಡಿಕಾರಿದರು.

ಮತ್ತೆ 6 ಇಸ್ರೇಲ್ ಪ್ರಜೆಗಳನ್ನು ಬಿಡುಗಡೆ ಮಾಡಿದ ಹಮಾಸ್

ರಫಾ: ಇಸ್ರೇಲ್‌-ಹಮಾಸ್‌ ಕದನ ವಿರಾಮದ ಭಾಗವಾಗಿ ತಾವು ಒತ್ತೆಯಿರಿಸಿಕೊಂಡಿದ್ದ 6 ಇಸ್ರೇಲ್ ಪ್ರಜೆಗಳನ್ನು ಹಮಾಸ್ ಉಗ್ರರು ಶನಿವಾರ ಬಿಡುಗಡೆ ಮಾಡಿದ್ದಾರೆ.ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯ ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸುವ ಗಾಜಾ ಕದನ ವಿರಾಮ ಒಪ್ಪಂದದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ತಲ್ ಶೋಹಂ, ಅವೆರಾ ಮೆಂಗಿಸ್ತು, ಒಮರ್ ವೆಂಕರ್ಟ್ ಸೇರಿದಂತೆ 6 ಇಸ್ರೇಲಿಗಳನ್ನು ರಫಾ ನಗರದಲ್ಲಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗಿದೆ. ವರ್ಷದಿಂದ ಒತ್ತೆಯಾಳುಗಳಾಗಿದ್ದ ತಮ್ಮವರನ್ನು ಮರಳಿ ಪಡೆಯುತ್ತಿರುವ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ

ಹಮಾಸ್ ಉಗ್ರನಿಗೆ ಕಿಸ್: ಈ ನಡುವೆ ಹಮಾಸ್‌ ಉಗ್ರನ ಹಣೆಗೆ ಬಂಧಮುಕ್ತ ಇಸ್ರೇಲಿ ಒತ್ತೆಯಾಳು ಮುತ್ತು ನೀಡಿರುವ ದೃಶ್ಯ ವೈರಲ್‌ ಆಗಿದೆ.

ಮಾ.11, 12ರಂದು ಮಾರಿಷಸ್‌ಗೆ ಮೋದಿ ಪ್ರವಾಸ

ಪೋರ್ಟ್‌ ಲೂಯಿಸ್‌: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಮಾರಿಷಸ್‌ನ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿದ್ದು, 2 ದಿನಗಳ (ಮಾ.11 ಹಾಗೂ 12) ಆ ದೇಶದ ಪ್ರವಾಸ ಕೈಗೊಳ್ಳಲಿದ್ದಾರೆ.ಈ ಕುರಿತು ಮಾರಿಷಸ್‌ ಅಧ್ಯಕ್ಷ ನವಿನ್‌ ರಾಮಗುಲಾಂ ಸಂಸತ್ತಿನಲ್ಲಿ ಹೇಳಿಕೆ ನೀಡಿ ‘ನನ್ನ ಆಮಂತ್ರಣವನ್ನು ಸ್ವೀಕರಿಸಿ ಮೋದಿ, ತಮ್ಮ ವ್ಯಸ್ತ ವೇಳಾಪಟ್ಟಿಯ ನಡುವೆಯೂ ನಮ್ಮ 57ನೇ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇದು ಉಭಯ ದೇಶಗಳ ನಡುವಿನ ಸ್ನೇಹದ ಸಂಕೇತ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

1968ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನೆನಪಾರ್ಥ ಮಾ.12ನ್ನು ಮಾರಷಸ್‌ ಪ್ರತಿ ವರ್ಷ ರಾಷ್ಟ್ರೀಯ ದಿನವನ್ನಾಗಿ ಅಚರಿಸಿಕೊಂಡು ಬರುತ್ತಿದ್ದು, ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅತಿಥಿಯಾಗಿ ಭಾಗವಹಿಸಿದ್ದರು.

ರೈಲು ಮಾರ್ಗಕ್ಕಾಗಿ ಮೇರಠ್‌ನ 150 ವರ್ಷ ಹಳೆಯ ಮಸೀದಿ ಧ್ವಂಸ

ಮೇರಠ್‌: ದೆಹಲಿ-ಮೇರಠ್‌ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ಇಲ್ಲಿನ ದೆಹಲಿ ರಸ್ತೆಯಲ್ಲಿರುವ 150 ವರ್ಷ ಹಳೆಯ ಮಸೀದಿಯನ್ನು ಕೆಡವಲಾಗಿದೆ.ಆರ್‌ಆರ್‌ಟಿಎಸ್‌ ಕಾರಿಡಾರ್ ನಿರ್ಮಾಣ ಮಾಡುತ್ತಿರುವ ಮಾರ್ಗಮಧ್ಯದಲ್ಲಿ ಮಸೀದಿ ಇತ್ತು. ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗುತ್ತಿದ್ದ ಕಾರಣ ಮಸೀದಿಯನ್ನು ಕೆಡವಲಾಗಿದ್ದು, ಮುಸ್ಲಿಮರೇ ಮುಂದೆ ನಿಂತು ಕೆಡವಲು ಕೈಜೋಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬ್ರಿಜೇಶ್ ಕುಮಾರ್ ಸಿಂಗ್, ‘ಮುಸ್ಲಿಂ ಸಮುದಾಯವೇ ಮಸೀದಿ ತೆರವುಗೊಳಿಸುವ ಉಪಕ್ರಮ ತೆಗೆದುಕೊಂಡಿತು. ಮುಸ್ಲಿಮರ ಸಂಪೂರ್ಣ ಒಪ್ಪಿಗೆ ಪಡೆದೇ ಮಸೀದಿಯನ್ನು ಕೆಡವಲಾಗಿದೆ’ ಎಂದು ಸ್ಪಷ್ಟಪಡಿಸಿದರು.