ಸಾರಾಂಶ
ಮುಂಬೈ: ಶ್ರೀರಾಮ ಸಸ್ಯಹಾರಿಯಲ್ಲ. 14 ವರ್ಷ ವನವಾಸದಲ್ಲಿದ್ದಾಗ ಪ್ರಾಣಿಗಳನ್ನು ಬೇಟೆಯಾಡಿ ರಾಮ ಮಾಂಸ ಸೇವಿಸುತ್ತಿದ್ದ. ಆತ ಮಾಂಸಹಾರಿಯಾಗಿದ್ದ ಎಂದು ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೇಳಿಕೆ ಬೆನ್ನಲ್ಲೇ ಜಿತೇಂದ್ರ ವಿರುದ್ಧ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಜಿತೇಂದ್ರ ಕ್ಷಮೆಯಾಚಿಸಿದ್ದಾರೆ.
ಬುಧವಾರ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಿತೇಂದ್ರ ‘ಶ್ರೀರಾಮ ನಮ್ಮವನು. ಅವನು ಬಹುಜನರಿಗೆ ಸೇರಿದವನು. ಆತ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದ. 14 ವರ್ಷಗಳ ಕಾಲ ಕಾಡಿನಲ್ಲಿ ವಾಸವಿದ್ದ ವ್ಯಕ್ತಿ ತರಕಾರಿಗಳನ್ನು ಹುಡುಕಿ ಎಲ್ಲಿ ಹೋಗುತ್ತಾನೆ? ಅವರು (ಬಿಜೆಪಿ) ರಾಮನನ್ನು ಉದಾಹರಣೆ ನೀಡಿ ಎಲ್ಲರನ್ನೂ ಸಸ್ಯಾಹಾರಿಗಳನ್ನು ಮಾಡಲು ಯತ್ನಿಸುತ್ತಿದ್ದಾರೆ’ ಎಂದು ವಿವಾದಿತ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಬಿಜೆಪಿ, ಅಜಿತ್ ಪವಾರ್ ಎನ್‌ಸಿಪಿ ಬಣದ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರು ಜಿತೇಂದ್ರ ಮನೆ ಮುಂದೆ ಭಾರೀ ಪ್ರತಿಭಟನೆ ನಡೆಸಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಅಲ್ಲದೇ ಅವರು ಹಿಂದೂ ಭಾವನೆಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು.
ವಿವಾದ ಬೆನ್ನಲ್ಲೇ ಜಿತೇಂದ್ರ ಕ್ಷಮೆ: ತಮ್ಮ ಹೇಳಿಕೆ ಭಾರೀ ವಿವಾದ ಹುಟ್ಟು ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ಜಿತೇಂದ್ರ ‘ನಾನು ಸಂಶೋಧನೆ ಇಲ್ಲದೆ ಮಾತನಾಡುವುದಿಲ್ಲ. ನಾನು ಹೇಳಿದ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ವಾಲ್ಮೀಕಿ ರಾಮಾಯಣದ ಅಯೋಧ್ಯಾ ಕಾಂಡದ 102ನೇ ಶ್ಲೋಕದಲ್ಲಿ ರಾಮ ಮಾಂಸಾಹಾರಿ ಎಂಬುದು ಉಲ್ಲೇಖವಿದೆ’ ಎಂದಿದ್ದಾರೆ.