‘ನ್ಯಾಯಾಂಗದ ಕಾರ್ಯನಿರ್ವಹಣೆ ಅಥವಾ ತೀರ್ಪುಗಳಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ಅದು ಕೊಲೀಜಿಯಂ ಮೇಲೆ ಒತ್ತಡವನ್ನೂ ಹೇರುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾ। ಬಿ.ಆರ್. ಗವಾಯಿ ಹೇಳಿದ್ದಾರೆ.
ನವದೆಹಲಿ: ‘ನ್ಯಾಯಾಂಗದ ಕಾರ್ಯನಿರ್ವಹಣೆ ಅಥವಾ ತೀರ್ಪುಗಳಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ಅದು ಕೊಲೀಜಿಯಂ ಮೇಲೆ ಒತ್ತಡವನ್ನೂ ಹೇರುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾ। ಬಿ.ಆರ್. ಗವಾಯಿ ಹೇಳಿದ್ದಾರೆ.
ಕೊಲಿಜಿಯಂ ನಿರ್ಧಾರ ತೆಗೆದುಕೊಳ್ಳುವಾಗ ವಿವಿಧ ಅಭಿಪ್ರಾಯ ಪರಿಗಣಿಸುತ್ತದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಕೊಲಿಜಿಯಂ ಒಂದು ನಿರ್ಧಾರ ತೆಗೆದುಕೊಳ್ಳುವಾಗ ವಿವಿಧ ವ್ಯಕ್ತಿಗಳ ಅಭಿಪ್ರಾಯ ಪರಿಗಣಿಸುತ್ತದೆ. ಆದಾದ ಬಳಿಕವೇ ನಿರ್ಧರಿಸುತ್ತದೆ. ಹಾಗೆಂದ ಮಾತ್ರಕ್ಕೆ, ಕೊಲಿಜಿಎಂ ಮೇಲೆ ಅವರೆಲ್ಲರ ಒತ್ತಡ ಹೇರುತ್ತಿದ್ದಾರೆ ಎಂದಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಭಾವ ಬೀರುತ್ತಿವೆ’ ಎಂಬ ಆರೋಪ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಅನೇಕರಿಂದ ಕೇಳಿಬರುತ್ತಿರುವ ಹೊತ್ತಿನಲ್ಲೇ ಗವಾಯಿ ಈ ಸ್ಪಷ್ಟನೆ ನೀಡಿದ್ದಾರೆ.
ಈ ಮೊದಲು, ಮಾಜಿ ಸಿಜೆಐ ನ್ಯಾ। ಡಿ.ವೈ. ಚಂದ್ರಚೂಡ್ ಅವರು ಸಹ, ‘ನ್ಯಾಯಾಂಗವು ವಿಪಕ್ಷವಲ್ಲ. ಕಾನೂನು ಪರಿಶೀಲನೆಯಷ್ಟೇ ನಮ್ಮ ಕೆಲಸ’ ಎನ್ನುವ ಮೂಲಕ ಇಂತಹ ಆರೋಪಗಳನ್ನು ಅಲ್ಲಗಳೆದಿದ್ದರು.
ಮೋದಿ ಚಂದ್ರಚೂಡ್ ಭೇಟಿ ತಪ್ಪಲ್ಲ:
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು, ಅಂದು ಸಿಜೆಐ ಆಗಿದ್ದ ಚಂದ್ರಚೂಡ್ ಅವರ ನಿವಾಸದಲ್ಲಿ ನಡೆದ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆಯೂ ಪ್ರತಿಕ್ರಿಯಿಸಿರುವ ಗವಾಯಿ, ‘ಕಾರ್ಯಾಂಗ ಮತ್ತು ನ್ಯಾಯಾಂಗ ಸ್ವತಂತ್ರ ಸಂಸ್ಥೆಗಳಾಗಿದ್ದು, ತಮ್ಮದೇ ವ್ಯಾಪ್ತಿಗಳಲ್ಲಿ ಕೆಲಸ ಮಾಡುವುದರಿಂದ, ಎರಡೂ ಸಂಸ್ಥೆಗಳ ಸದಸ್ಯರು ಭೇಟಿಯಾದರೆ ತಪ್ಪಿಲ್ಲ’ ಎಂದಿದ್ದಾರೆ.
