ಸಾರಾಂಶ
ಕ್ರಿಮಿನಲ್ ಕೇಸಿನಲ್ಲಿ ಬಂಧಿತ ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಿಗಳ ವಜಾಕ್ಕೆ ಅವಕಾಶ ಕೊಡುವ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವ ಹೊತ್ತಿನಲ್ಲೇ, ದೇಶದ ವಿವಿಧ ರಾಜ್ಯಗಳ ಸಚಿವರ ಮೇಲಿರುವ ಕ್ರಿಮಿನಲ್ ಪ್ರಕರಣ ಮತ್ತು ಅವರ ಸಂಪತ್ತಿನ ಕುರಿತ ವರದಿ ಬಿಡುಗಡೆ
ನವದೆಹಲಿ: ಕ್ರಿಮಿನಲ್ ಕೇಸಿನಲ್ಲಿ ಬಂಧಿತ ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಿಗಳ ವಜಾಕ್ಕೆ ಅವಕಾಶ ಕೊಡುವ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವ ಹೊತ್ತಿನಲ್ಲೇ, ದೇಶದ ವಿವಿಧ ರಾಜ್ಯಗಳ ಸಚಿವರ ಮೇಲಿರುವ ಕ್ರಿಮಿನಲ್ ಪ್ರಕರಣ ಮತ್ತು ಅವರ ಸಂಪತ್ತಿನ ಕುರಿತ ವರದಿಯೊಂದನ್ನು ಚುನಾವಣಾ ಕಣ್ಗಾವಲು ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಬಿಡುಗಡೆ ಮಾಡಿದೆ.
ವರದಿ ಅನ್ವಯ, ದೇಶದ ಬಿಲಿಯನೇರ್ (100 ಕೋಟಿ ರು. ಆಸ್ತಿ ಹೊಂದಿದ) ಸಚಿವರ ಪಟ್ಟಿಯಲ್ಲಿ 8 ಜನರೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಜೊತೆಗೆ ಅತಿ ಹೆಚ್ಚು ಕ್ರಿಮಿನಲ್ ಕೇಸು ಹೊಂದಿರುವ ಸಚಿವರ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
ಬಿಲಿಯನೇರ್‌ಗಳು:
100 ಕೋಟಿ ರು.ಗೂ ಹೆಚ್ಚು ಆಸ್ತಿ ಹೊಂದಿರುವ ಸಚಿವರ ಪಟ್ಟಿಯಲ್ಲಿ ಕರ್ನಾಟಕ ನಂ.1 ಆಗಿದೆ. ಕರ್ನಾಟಕದಲ್ಲಿ 8, ಆಂಧ್ರದಲ್ಲಿ 6, ಮಹಾರಾಷ್ಟ್ರದಲ್ಲಿ 4 ಸಚಿವರು 100 ಕೋಟಿ ರು.ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಪಕ್ಷವಾರು, ಬಿಜೆಪಿಯಲ್ಲಿ 14, ಕಾಂಗ್ರೆಸ್‌ನಲ್ಲಿ 11, ಟಿಡಿಪಿಯಲ್ಲಿ 6 ಮಂದಿ 100 ಕೋಟಿ ರು.ಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಟಿಡಿಪಿಯ ಡಾ.ಚಂದ್ರಶೇಖರ್ ಪೆಮ್ಮಸಾನಿ 5705 ಕೋಟಿ ರು. ಆಸ್ತಿಯೊಂದಿಗೆ ದೇಶದ ಅತಿ ಶ್ರೀಮಂತ ಸಚಿವ ಎನ್ನಿಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ 1413 ಕೋಟಿ ರು. ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಅತಿ ಹೆಚ್ಚು ಸಾಲ ಹೊಂದಿರುವ ಸಚಿವರ ಪಟ್ಟಿಯಲ್ಲಿ 265 ಕೋಟಿ ರು.ನೊಂದಿಗೆ ಡಿಕೆಶಿ 2ನೇ ಸ್ಥಾನದಲ್ಲಿದ್ದಾರೆ.
ಇನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಸಚಿವರ ಒಟ್ಟಾರೆ ಆಸ್ತಿ ಮೌಲ್ಯ 23,929 ಕೋಟಿ ರು. ಆಗಿದ್ದರೆ, ಸಚಿವರ ಸರಾಸರಿ ಆಸ್ತಿ 37.21 ಕೋಟಿ ರು. ಆಗಿದೆ.
ಕ್ರಿಮಿನಲ್ ಕೇಸು:
ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 643 ಸಚಿವರ ಪೈಕಿ ಶೇ.47 ಅಂದರೆ 302 ಸಚಿವರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಈ ಪೈಕಿ 174 ಮಂದಿ ವಿರುದ್ಧ ಕೊಲೆ, ಅಪಹರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳಂಥ ಗಂಭೀರ ಪ್ರಕರಣ ದಾಖಲಾಗಿವೆ ಎಂದು ವರದಿ ತಿಳಿಸಿದೆ.
ಕರ್ನಾಟಕವೂ ನಂ.2:
ಕರ್ನಾಟಕದ 31 ಸಚಿವರ ಪೈಕಿ 23 ಜನರ ಮೇಲೆ ಅಂದರೆ ಶೇ.74ರಷ್ಟು ಜನರ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿದೆ. ಹೀಗೆ ಶೇಕಡವಾರು ಲೆಕ್ಕದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ತಲಾ ಶೇ.88ರಷ್ಟು ಕ್ರಿಮಿನಲ್ ಕೇಸು ಹೊಂದಿರುವ ಆಂಧ್ರ ಮತ್ತು ಒಡಿಶಾ ಸಚಿವರು ಮೊದಲ ಸ್ಥಾನದಲ್ಲಿದ್ದಾರೆ.
ಕೇಂದ್ರ, ರಾಜ್ಯ:
ರಾಷ್ಟ್ರೀಯ ಮಟ್ಟದಲ್ಲಿ 29 ಕೇಂದ್ರ ಸಚಿವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ರಾಜ್ಯಗಳ ವಿಚಾರಕ್ಕೆ ಬಂದಾಗ ಆಂಧ್ರ, ತಮಿಳುನಾಡು, ಬಿಹಾರ, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ತೆಲಂಗಾಣ, ಹಿಮಾಚಲ ಪ್ರದೇಶ, ದೆಹಲಿ ಮತ್ತು ಪುದುಚೇರಿ ಅತಿ ಹೆಚ್ಚು ಕ್ರಿಮಿನಲ್ ಕೇಸು ಹೊಂದಿರುವ ಸಚಿವರನ್ನು ಹೊಂದಿವೆ. ಇಲ್ಲಿ ಶೇ.60ಕ್ಕೂ ಹೆಚ್ಚು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ವಿಶೇಷವೆಂದರೆ ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡದ ಯಾವುದೇ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ಇಲ್ಲ ಎಂದು ವರದಿ ಹೇಳಿದೆ.
ಟಾಪ್ 3 ಶ್ರೀಮಂತರು
1. ಡಾ। ಪೆಮ್ಮಸಾನಿಆಂಧ್ರ ₹ 5705 ಕೋಟಿ
2. ಡಿ.ಕೆ.ಶಿವಕುಮಾರ್‌ಕರ್ನಾಟಕ ₹ 1413 ಕೋಟಿ
3. ಚಂದ್ರಬಾಬು ನಾಯ್ಡುಆಂಧ್ರ ₹ 931 ಕೋಟಿ
ಕ್ಲೀನ್ ಸಚಿವರು
ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡದ ಯಾವುದೇ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ಇಲ್ಲ.